ಚುನಾವಣೆ, ರಾಜಕೀಯ ಜಾಹೀರಾತುಗಳಲ್ಲಿ ಪಾರದರ್ಶಕತೆಯ ಭರವಸೆ ನೀಡಿದ ಗೂಗಲ್

Update: 2019-01-22 14:44 GMT

ಹೊಸದಿಲ್ಲಿ,ಜ.22: ಟ್ವಿಟರ್ ಬಳಿಕ ಈಗ ಗೂಗಲ್ ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ತನ್ನ ವೇದಿಕೆಯಲ್ಲಿ ರಾಜಕೀಯ ಜಾಹೀರಾತುಗಳಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಪಣ ತೊಟ್ಟಿದೆ. ಜಾಹೀರಾತುಗಳು ಮತ್ತು ಅವುಗಳಿಗೆ ವ್ಯಯಿಸಲಾದ ಹಣದ ವಿವರಗಳನ್ನು ತಾನು ಒದಗಿಸುವುದಾಗಿ ಅದು ಹೇಳಿದೆ.

ತನ್ನ ಪರಿಷ್ಕೃತ ಚುನಾವಣಾ ಜಾಹೀರಾತು ನೀತಿಯಂತೆ ತನ್ನ ವೇದಿಕೆಯಲ್ಲಿ ಚುನಾವಣಾ ಜಾಹೀರಾತು ನೀಡಲು ಬಯಸುವ ಜಾಹೀರಾತುದಾರರು ಇಂತಹ ಪ್ರತಿಯೊಂದೂ ಜಾಹೀರಾತಿಗೂ ಭಾರತೀಯ ಚುನಾವಣಾ ಆಯೋಗದ ಅಥವಾ ಅದು ಅಧಿಕಾರ ನೀಡಿರುವ ಯಾವುದೇ ಪ್ರಾಧಿಕಾರದ ‘ಪೂರ್ವ ಪ್ರಮಾಣಪತ್ರ’ವನ್ನು ಸಲ್ಲಿಸುವುದು ಅಗತ್ಯವಾಗಿದೆ ಎಂದು ಗೂಗಲ್ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೆ ಜಾಹೀರಾತುದಾರರ ಚುನಾವಣಾ ಜಾಹೀರಾತನ್ನು ತನ್ನ ವೇದಿಕೆಯಲ್ಲಿ ಪೋಸ್ಟ್ ಮಾಡುವ ಮುನ್ನ ತಾನು ಅವರ ಗುರುತನ್ನು ದೃಢೀಕರಿಸಿಕೊಳ್ಳುವುದಾಗಿಯೂ ಅದು ಹೇಳಿದೆ.

ಜಾಹೀರಾತುದಾರರ ದೃಢೀಕರಣ ಪ್ರಕ್ರಿಯೆ ಫೆ.14ರಂದು ಆರಂಭಗೊಳ್ಳಲಿದೆ ಮತ್ತು ಭಾರತಕ್ಕೆ ನಿರ್ದಿಷ್ಟವಾದ ರಾಜಕೀಯ ಜಾಹೀರಾತು ಪಾರದರ್ಶಕತೆ ವರದಿ ಮತ್ತು ರಾಜಕೀಯ ಜಾಹೀರಾತುಗಳ ಲೈಬ್ರರಿ ಮಾರ್ಚ್‌ನಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದೂ ಅದು ತಿಳಿಸಿದೆ.

ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅನಪೇಕ್ಷಿತ ಮಾರ್ಗಗಳ ಮೂಲಕ ದೇಶದ ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ಯಾವುದೇ ಪ್ರಯತ್ನಗಳನ್ನು ನಡೆಸಿದರೆ ಕಠಿಣ ಕ್ರಮವನ್ನು ಕೈಗೊಳ್ಳುವುದಾಗಿ ಸರಕಾರವು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಎಚ್ಚರಿಕೆ ನೀಡಿತ್ತು.

ತಮ್ಮ ಚುನಾವಣಾ ಜಾಹೀರಾತುಗಳಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದಾಗಿ ಟ್ವಿಟರ್ ಮತ್ತು ಫೇಸ್‌ಬುಕ್ ಈಗಾಗಲೇ ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News