ಕಾಶ್ಮೀರದಲ್ಲಿ ಮೂವರು ಉಗ್ರರ ಹತ್ಯೆ

Update: 2019-01-22 14:48 GMT
ಸಾಂದರ್ಭಿಕ ಚಿತ್ರ

ಶ್ರೀನಗರ, ಜ.22: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಐಪಿಎಸ್ ಅಧಿಕಾರಿಯ ಸಹೋದರನ ಸಹಿತ ಮೂವರು ಉಗ್ರರು ಹತರಾಗಿದ್ದು, ಓರ್ವ ಯೋಧ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಹತರಾದ ಉಗ್ರರಲ್ಲಿ ಶೋಫಿಯಾನ್‌ನ ಡ್ರಾಗಡ್ ಗ್ರಾಮದ ನಿವಾಸಿ ಶಮ್ಸುಲ್ ಹಕ್ ಕೂಡಾ ಸೇರಿದ್ದಾನೆ. 2012ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಇನಾಮುಲ್ ಹಕ್‌ ಸಹೋದರ ಶಮ್ಸುಲ್ ಹಕ್ ಉಗ್ರ ಸಂಘಟನೆಗೆ ಸೇರ್ಪಡೆಗೊಳ್ಳುವ ಮುನ್ನ ಶ್ರೀನಗರದ ಕಾಲೇಜೊಂದರಲ್ಲಿ ‘ಯುನಾನಿ ಮೆಡಿಸಿನ್’ನ ಪದವಿ ವಿದ್ಯಾರ್ಥಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಉಗ್ರರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಗುಂಡಿನ ಕಾಳಗದಲ್ಲಿ ಭದ್ರತಾ ಪಡೆಯ ಯೋಧನಿಗೆ ಗುಂಡೇಟು ತಗುಲಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಗುಂಡಿನ ಕಾಳಗದ ದೃಶ್ಯವನ್ನು ಚಿತ್ರೀಕರಿಸುತ್ತಿದ್ದ ನಾಲ್ವರು ಪತ್ರಕರ್ತರಿಗೆ ಭದ್ರತಾ ಪಡೆಗಳು ಹಾರಿಸಿದ ಪೆಲೆಟ್ ಗುಂಡು ತಗುಲಿ ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಭದ್ರತಾ ಪಡೆಗಳ ಕಾರ್ಯನಿರ್ವಹಣೆಗೆ ಅಡ್ಡಿ ಮಾಡಲು ಪ್ರಯತ್ನಿಸಿದ ಜನರನ್ನು ಅಶ್ರುವಾಯು ಮತ್ತು ಪೆಲೆಟ್ ಗನ್ ಸಿಡಿಸಿ ಚದುರಿಸಲಾಯಿತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News