ರಫೇಲ್ ನಂತರ ಇವಿಎಂ ಹ್ಯಾಕಿಂಗ್ ಅತಿ ದೊಡ್ಡ ಸುಳ್ಳು: ಅರುಣ್ ಜೇಟ್ಲಿ

Update: 2019-01-22 16:24 GMT

ಹೊಸದಿಲ್ಲಿ, ಜ. 22: ರಫೇಲ್ ಒಪ್ಪಂದ, 15 ಕೈಗಾರಿಕೋದ್ಯಮಿಗಳ ಅಸ್ತಿತ್ವದಲ್ಲಿಲ್ಲದ ಸಾಲ ಮನ್ನಾದ ಬಳಿಕ ಇವಿಎಂ ಹ್ಯಾಕಿಂಗ್ ಅತಿ ದೊಡ್ಡ ಸುಳ್ಳು ಎಂದು ಹಣಕಾಸು ಸಚಿವ ಅರುಣ್ ಜೇಟ್ಟಿ ಟ್ವೀಟ್ ಮಾಡಿದ್ದಾರೆ.

ಯುಪಿಎ ಸರಕಾರದ ಅವಧಿಯಲ್ಲಿ ಚುನಾವಣಾ ಆಯೋಗ ಹಾಗೂ ಲಕ್ಷಾಂತರ ಸಿಬ್ಬಂದಿ ಇವಿಎಂಗಳ ಉತ್ಪಾದನೆ, ಪ್ರೋಗ್ರಾಂ, ಚುನಾವಣೆ ನಡೆಸುವುದರಲ್ಲಿ ಬಿಜೆಪಿಯೊಂದಿಗೆ ಭಾಗಿಯಾಗಿದ್ದಾರೆ ಎಂದು ಹೇಳುವುದೇ?, ಇದು ಸಂಪೂರ್ಣ ಅಸಂಬದ್ಧ ಎಂದು ಜೇಟ್ಲಿ ಹೇಳಿದ್ದಾರೆ. ಯಾವುದೇ ತ್ಯಾಜ್ಯವನ್ನು ನುಂಗುವಷ್ಟು ಜನರು ಮೂರ್ಖರು ಎಂದು ಕಾಂಗ್ರೆಸ್ ಭಾವಿಸುತ್ತದೆಯೇ? ಕಾಂಗ್ರೆಸ್‌ನಲ್ಲಿ ಇಂತಹ ಹುಚ್ಚು ಸಾಂಕ್ರಾಮಿಕವಾಗಿ ಹಬ್ಬುತ್ತಿದೆ ಎಂದು ಅವರು ಹೇಳಿದರು.

 ಕಾಂಗ್ರೆಸ್ ಅಲ್ಲದೆ, ಹಲವು ಪ್ರತಿಪಕ್ಷಗಳು ಇವಿಎಂಗಳ ಕಾರ್ಯ ನಿರ್ವಹಣೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು. ಮುಂದಿನ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಇವಿಎಂಗಳನ್ನು ಬಳಸುವ ಬಗ್ಗೆ ಪ್ರತಿಪಕ್ಷಗಳು ಮುಂದಿನ ನಡೆಯನ್ನು ನಿರ್ಧರಿಸಲು ನಾಲ್ವರು ಸದಸ್ಯರ ಸಮಿತಿ ರೂಪಿಸಲಾಗಿದೆ ಎಂದು ಪಶ್ಚಿಮಬಂಗಳಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದರು. ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಎಸ್.ಪಿ. ಅಧ್ಯಕ್ಷ ಅಖಿಲೇಶ್ ಯಾದವ್, ಬಿಎಸ್‌ಪಿ ನಾಯಕ ಸತೀಶ್ ಮಿಶ್ರಾ ಹಾಗೂ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಈ ಸಮಿತಿಯ ಸದಸ್ಯರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News