ದಿಲ್ಲಿಯಲ್ಲಿ ಆಲಿಕಲ್ಲಿನೊಂದಿಗೆ ಭಾರೀ ಮಳೆ

Update: 2019-01-22 16:27 GMT

ಹೊಸದಿಲ್ಲಿ, ಜ. 22: ದಿಲ್ಲಿಯ ವಿವಿಧ ಭಾಗಗಳಲ್ಲಿ ಹಾಗೂ ಸಮೀಪದ ಪ್ರದೇಶಗಳಲ್ಲಿ ಮಂಗಳವಾರ ಉಷ್ಣಾಂಶ ತೀವ್ರ ಇಳಿಕೆಯಾದುದರಿಂದ ಆಲಿಕಲ್ಲುಗಳಿಂದ ಕೂಡಿದ ಭಾರೀ ಮಳೆಯಾಗಿದೆ.

ಆಕಾಶದಲ್ಲಿ ಮೋಡ ದಟ್ಟೈಸಿದ ಪರಿಣಾಮ ನಗರಾದ್ಯಂತ ಸಂಚಾರ ನಿಧಾನವಾಯಿತು ಹಾಗೂ ದೃಗ್ಗೋಚರದ ಕಡಿಮೆ ಆಯಿತು. ಈ ಹವಾಮಾನ ವ್ಯವಸ್ಥೆ ಉತ್ತರಪ್ರದೇಶದತ್ತ ಚಲಿಸುತ್ತಿರುವುದರಿಂದ ದಿಲ್ಲಿಯಲ್ಲಿ ಹನಿ ಹಾಗೂ ಲಘು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಿಲ್ಲಿಯಲ್ಲಿ ಇಂದು ಲಘು ಮಳೆ ಹಾಗೂ ಕೆಲವು ಕಡೆಗಳಲ್ಲಿ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈ ಹಿಂದೆ ಹೇಳಿತ್ತು. ಈ ಹವಾಮಾನ ವೈಪರಿತ್ಯದಿಂದ 15 ರೈಲುಗಳ ಸಂಚಾರದಲ್ಲಿ ವಿಳಂಬವಾಯಿತು. ಇದರಲ್ಲಿ ಹೌರಾಹ್-ಹೊಸದಿಲ್ಲಿ ಪೂರ್ವ ಎಕ್ಸ್‌ಪ್ರೆಸ್, ಮಾಲ್ಡಾ-ದಿಲ್ಲಿ ಜಂಕ್ಷನ್ ಫರಖಾ ಎಕ್ಸ್‌ಪ್ರೆಸ್, ಮುಂಬೈ-ಅಮೃತಸರ ಎಕ್ಸ್‌ಪ್ರೆಸ್ ಹಾಗೂ ಇತರ ರೈಲುಗಳು ಸೇರಿವೆ. ಪುರಿ-ಹೊಸದಿಲ್ಲಿ ಪುರುಷೋತ್ತಮ ಎಕ್ಸ್‌ಪ್ರೆಸ್ ಆರು ಗಂಟಗಳ ಕಾಲ ತಡವಾಗಿ ಸಂಚರಿಸಿತು ಎಂದು ಉತ್ತರ ರೈಲ್ವೆ ತಿಳಿಸಿದೆ. ಮಳೆಯ ಕಾರಣಕ್ಕೆ ದಿಲ್ಲಿ ವಿಮಾನ ನಿಲ್ದಾಣ ರಸ್ತೆಯಲ್ಲಿ ರಸ್ತೆ ತಡೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ವಿಸ್ತಾರದಂತಹ ಹಲವು ವಿಮಾನ ಯಾನ ಸಂಸ್ಥೆಗಳು ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತಲುಪಲು ಹೆಚ್ಚುವರಿ ಸಮಯ ನೀಡಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News