ಮಂಧಾನಾ, ಜೆಮಿಮಾ ಮಿಂಚು: ಕಿವೀಸ್ ವಿರುದ್ಧ ಭಾರತಕ್ಕೆ ಜಯ
ನೇಪಿಯರ್, ಜ.24: ಮೊನಚಿಲ್ಲದ ನ್ಯೂಝಿಲೆಂಡ್ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದ ಸ್ಮತಿ ಮಂಧಾನಾ ಹಾಗೂ ಜೆಮಿಮಾ ರೋಡ್ರಿಗಸ್ ಗುರುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ 9 ವಿಕೆಟ್‌ಗಳ ಜಯ ತಂದುಕೊಟ್ಟಿದ್ದಾರೆ. ಈ ಮೂಲಕ 3 ಏಕದಿನ ಪಂದ್ಯಗಳ ಸರಣಿಯಲ್ಲಿ ಮಿಥಾಲಿ ಬಳಗ 1-0ಯಿಂದ ಮುನ್ನಡೆ ಸಾಧಿಸಿ ಶುಭಾರಂಭ ಮಾಡಿದೆ. 22 ವರ್ಷದ ಮಂಧಾನಾ ಶತಕ (105) ಹಾಗೂ 18 ವರ್ಷದ ಜೆಮಿಮಾ ಭರ್ಜರಿ ಅರ್ಧಶತಕದ (ಅಜೇಯ 81)ಬಲದಿಂದ ಭಾರತ ಮಹಿಳಾ ಕ್ರಿಕೆಟ್ ತಂಡ ನ್ಯೂಝಿಲೆಂಡ್ ನೀಡಿದ್ದ 193 ರನ್‌ಗಳ ಗುರಿಯನ್ನು 33 ಓವರ್‌ಗಳಲ್ಲಿ ತಲುಪಿತು. ಇದು ಮಂಧಾನಾ ಅವರ ನಾಲ್ಕನೇ ಅಂತರ್‌ರಾಷ್ಟ್ರೀಯ ಶತಕವಾದರೆ ಜೆಮಿಮಾ ಅವರಿಗೆ ಚೊಚ್ಚಲ ಅರ್ಧಶತಕದ ಸಂಭ್ರಮ. ಇವರಿಬ್ಬರೂ ಪ್ರಥಮ ವಿಕೆಟ್‌ಗೆ ಸೇರಿಸಿದ್ದು ಬರೋಬ್ಬರಿ 190 ರನ್.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಝಿಲೆಂಡ್, ಸ್ಪಿನ್ ಅವಳಿಗಳಾದ ಭಾರತದ ಪೂನಮ್ ಯಾದವ್ ಹಾಗೂ ಏಕ್ತಾ ಬಿಸ್ತ್ ದಾಳಿಗೆ ತತ್ತರಿಸಿತು. ಇವರಿಬ್ಬರೂ ತಲಾ 3 ವಿಕೆಟ್ ಹಂಚಿಕೊಂಡರು. ಕಿವೀಸ್ ಪರ ಸುಸಿ ಬೇಟ್ಸ್(38), ಆ್ಯಮಿ ಸಟ್ಟರ್ಥ್‌ವೈಟ್(31) ಬ್ಯಾಟಿಂಗ್‌ನಲ್ಲಿ ಮಿಂಚಿದರು. ಅಂತಿಮವಾಗಿ ನ್ಯೂಝಿಲೆಂಡ್ ವನಿತೆಯರು 48.4 ಓವರ್‌ಗಳಲ್ಲಿ 192 ರನ್‌ಗೆ ಗಂಟುಮೂಟೆ ಕಟ್ಟಿದರು. ಭರ್ಜರಿ ಶತಕ ಸಿಡಿಸಿದ ಭಾರತದ ಸ್ಮತಿ ಮಂಧಾನಾಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ಉಭಯ ತಂಡಗಳ ಮಧ್ಯೆ ಎರಡನೇ ಪಂದ್ಯ ಜ.29ರಂದು ವೌಂಟ್ ವೌಂಗಾನ್ಯೂನಲ್ಲಿ ನಡೆಯಲಿದೆ.