ದ.ಆಫ್ರಿಕದ ಆಲ್‌ರೌಂಡರ್ ಜೊಹಾನ್ ಬೋಥಾ ನಿವೃತ್ತಿ
ಜೋಹಾನ್ಸ್‌ಬರ್ಗ್, ಜ.24: ದಕ್ಷಿಣ ಆಫ್ರಿಕದ ಮಾಜಿ ಆಲ್‌ರೌಂಡರ್ ಜೊಹಾನ್ ಬೋಥಾ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ತಕ್ಷಣವೇ ನಿವೃತ್ತಿ ಘೋಷಿಸಿದ್ದಾರೆ.
ಬೋಥಾ ಪ್ರತಿನಿಧಿಸುತ್ತಿರುವ ಆಸ್ಟ್ರೇಲಿಯದ ಟಿ-20 ಲೀಗ್ ತಂಡ ಹೊಬರ್ಟ್ ಹರಿಕೇನ್ಸ್ ಬುಧವಾರ ಈ ವಿಚಾರ ತಿಳಿಸಿದೆ. ಬೋಥಾ, ಕ್ರಿಕೆಟ್ ಆಡಿ ಸಾಕಷ್ಟು ದಣಿದಿರುವ ಹಿನ್ನೆಲೆಯಲ್ಲಿ ನಿವೃತ್ತಿ ಘೋಷಿಸುತ್ತಿದ್ದಾರೆ ಎಂದು ಲೀಗ್ ತಿಳಿಸಿದೆ. 36ರ ಹರೆಯದ ಬೋಥಾ 2016ರಲ್ಲಿ ಆಸ್ಟ್ರೇಲಿಯದ ಪೌರತ್ವ ಸ್ವೀಕರಿಸಿದ್ದರು. ಸಿಡ್ನಿ ಸಿಕ್ಸರ್ ವಿರುದ್ಧ ಹೊಬರ್ಟ್ ತಂಡ ಸೋತಿದ್ದ ಪಂದ್ಯದಲ್ಲಿ ಅವರು ವಿಕೆಟ್ ಪಡೆಯಲು ವಿಫಲರಾಗಿದ್ದರು.
ಬೋಥಾ ದ.ಆಫ್ರಿಕದ ಪರ 2005ರಿಂದ 2012ರ ತನಕ 5 ಟೆಸ್ಟ್ ಪಂದ್ಯ, 78 ಏಕದಿನ ಹಾಗೂ 40 ಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 10 ಏಕದಿನ ಪಂದ್ಯಗಳಲ್ಲಿ ದ.ಆಫ್ರಿಕದ ನಾಯಕತ್ವ ವಹಿಸಿಕೊಂಡಿದ್ದರು. ಬೋಥಾ ನೇತೃತ್ವದಲ್ಲಿ 2009ರಲ್ಲಿ ಆಸ್ಟ್ರೇಲಿಯವನ್ನು 4-1 ಅಂತರದಿಂದ ಮಣಿಸಿದ್ದ ದ.ಆಫ್ರಿಕ ನಂ.1 ಏಕದಿನ ತಂಡವಾಗಿ ಹೊರಹೊಮ್ಮಿತ್ತು.