ಕೇರಳ ವಿರುದ್ಧ ಚಾಂಪಿಯನ್ ವಿದರ್ಭಕ್ಕೆ ಮುನ್ನಡೆ
ವಯನಾಡ್, ಜ.24: ಬಲಿಷ್ಠ ವಿದರ್ಭ ಹಾಗೂ ಚೊಚ್ಚಲ ಬಾರಿ ಸೆಮಿಫೈನಲ್ ಹಂತಕ್ಕೆ ತಲುಪಿರುವ ಕೇರಳ ತಂಡಗಳ ಮಧ್ಯೆ ನಡೆಯುತ್ತಿರುವ ರಣಜಿ ಕ್ರಿಕೆಟ್ ಪ್ರಥಮ ಸೆಮಿಫೈನಲ್ ಪಂದ್ಯದಲ್ಲಿ ಕೇರಳ ತಂಡ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ ವೇಗಿ ಉಮೇಶ್ ಯಾದವ್ ದಾಳಿಗೆ ಸಿಲುಕಿ 106 ರನ್‌ಗಳಿಸಿ ಆಲೌಟ್ ಆಗಿದೆ. ಪ್ರತಿಯಾಗಿ ತನ್ನ ಪ್ರಥಮ ಇನಿಂಗ್ಸ್ ಆರಂಭಿಸಿರುವ ವಿದರ್ಭ 5 ವಿಕೆಟ್‌ಗೆ 171 ರನ್ ಗಳಿಸಿದ್ದು ಭಾರೀ ಮುನ್ನಡೆಯತ್ತ ದಾಪುಗಾಲಿಟ್ಟಿದೆ. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೇರಳಕ್ಕೆ ರಾಷ್ಟ್ರೀಯ ತಂಡದ ಆಟಗಾರ ಉಮೇಶ್ ಯಾದವ್ ಮಾರಕವಾಗಿ ಪರಿಣಮಿಸಿದರು. 48 ರನ್‌ಗೆ ಒಟ್ಟು 7 ವಿಕೆಟ್ ಕಬಳಿಸಿದ ಅವರು, ಕೇರಳ ತಂಡದ ಫೈನಲ್ ಆಸೆಗೆ ಬಹುತೇಕ ತಣ್ಣೀರೆರೆಚಿದ್ದಾರೆ. ವಿದರ್ಭದ ಇನ್ನೋರ್ವ ಬೌಲರ್ ರಾಜೇಶ್ ಗುರ್ಬಾನಿ 3 ವಿಕೆಟ್ ಪಡೆದರು. ಸಚಿನ್ ಬೇಬಿ ನೇತೃತ್ವದ ಕೇರಳ ತಂಡದ ಪರ ವಿಷ್ಣು ವಿನೋದ್(37) ಅವರದ್ದೇ ಅತ್ಯಧಿಕ ಸ್ಕೋರ್. ನಾಯಕ ಸಚಿನ್(22) ಅಲ್ಪ ಕಾಣಿಕೆ ನೀಡಿದರು. ಪ್ರಥಮ ಇನಿಂಗ್ಸ್ ಆರಂಭಿಸಿದ ವಿದರ್ಭ ತಂಡ ನಾಯಕ ಫೈಝ್ ಫಝಲ್ ಅವರ ಅಮೋಘ ಅರ್ಧಶತಕ (75)ಹಾಗೂ ವಸೀಂ ಜಾಫರ್(34) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್‌ಗೆ 171 ರನ್ ಗಳಿಸಿದೆ.