×
Ad

ನಾನು ಮೋದಿ ವಿರುದ್ಧ ಹೋರಾಡುತ್ತೇನೆ, ಆದರೆ ಅವರನ್ನು ದ್ವೇಷಿಸುವುದಿಲ್ಲ: ರಾಹುಲ್ ಗಾಂಧಿ

Update: 2019-01-25 19:14 IST

ಭುವನೇಶ್ವರ,ಜ.25: ಹೆಚ್ಚುಕಡಿಮೆ ಪ್ರತಿದಿನ ಒಂದೆರಡು ಬಾರಿಯಾದರೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ದಾಳಿ ನಡೆಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂದಿ ಅವರು,ತಾನು ಅವರ ವಿರುದ್ಧ ಹೋರಾಡುತ್ತೇನೆ,ಆದರೆ ಅವರನ್ನು ದ್ವೇಷಿಸುವುದಿಲ್ಲ ಎಂದು ಶುಕ್ರವಾರ ಇಲ್ಲಿ ಸ್ಪಷ್ಟಪಡಿಸಿದರು.

‘‘ಅವರು(ಮೋದಿ) ನನ್ನನ್ನು ಒಪ್ಪುವುದಿಲ್ಲ ಎನ್ನುವುದು ನನಗೆ ಗೊತ್ತು ಮತ್ತು ನಾನೂ ಅವರನ್ನು ಒಪ್ಪುವುದಿಲ್ಲ. ನಾನು ಅವರೊಂದಿಗೆ ಹೋರಾಡುತ್ತೇನೆ ಮತ್ತು ಅವರು ಮತ್ತೆ ಪ್ರಧಾನಿಯಾಗದಂತೆ ಪ್ರಯತ್ನಿಸುತ್ತೇನೆ. ಆದರೆ ಅವರನ್ನು ನಾನು ದ್ವೇಷಿಸುವುದಿಲ್ಲ. ಅವರಿಗೆ ಅವರ ಅಭಿಪ್ರಾಯವನ್ನು ಹೊಂದಿರಲು ಹಕ್ಕು ನೀಡುತ್ತೇನೆ ’’ ಎಂದು ಇಲ್ಲಿ ‘ಒಡಿಶಾ ಸಂವಾದ’ದಲ್ಲಿ ಪಾಲ್ಗೊಂಡಿದ್ದ ರಾಹುಲ್ ಹೇಳಿದರು.

‘‘ಮೋದಿಯವರು ನನ್ನ ವಿರುದ್ಧ ದಾಳಿ ನಡೆಸಿದಾಗಲೆಲ್ಲ,ನನ್ನನ್ನು ನಿಂದಿಸಿದಾಗೆಲ್ಲ ಅವರು ನನ್ನನ್ನು ಅಪ್ಪಿಕೊಂಡಂತೆ ನನಗೆ ಭಾಸವಾಗುತ್ತದೆ. ಕಾಂಗ್ರೆಸ್ ಅವರಲ್ಲಿ ಕಳವಳವನ್ನು ಮೂಡಿಸಿದೆ. ಅದೂ ನನಗೆ ಗೊತ್ತು,ಅದರೆ ಅವರ ವಿರುದ್ಧ ನಮಗೆ ಸಿಟ್ಟಿಲ್ಲ. ಇದು ನಮ್ಮ ನಿಲುವು,ನಾವು ಜನರನ್ನು ದ್ವೇಷಿಸುವುದಿಲ್ಲ’’ ಎಂದರು.

ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಪೋಷಕ ಆರೆಸ್ಸೆಸ್‌ನಿಂದ ನಿಂದನೆ ತನ್ನ ಪಾಲಿನ ದೊಡ್ಡ ಉಡುಗೊರೆಗಳಾಗಿವೆ ಎಂದೂ ರಾಹುಲ್ ಹೇಳಿದರು.

ಮೋದಿ ಸರಕಾರದ ಎಲ್ಲ ಸಚಿವಾಲಯಗಳನ್ನೂ ಆರೆಸ್ಸೆಸ್ ನಿಯಂತ್ರಿಸುತ್ತಿದೆ. ಸರಕಾರದಲ್ಲಿ ಎಲ್ಲ ಕಡೆಯೂ ಆರೆಸ್ಸೆಸ್‌ನ ಪ್ರಭಾವ ಎದ್ದು ಕಾಣುತ್ತಿದೆ. ದೇಶದ ಎಲ್ಲ ಸಂಸ್ಥೆಗಳಲ್ಲಿ ತೂರಿಕೊಳ್ಳಲು ಮತ್ತು ನಿಯಂತ್ರಿಸಲು ಅದು ಬಯಸಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News