ಫುಟ್ಬಾಲ್: ಮಿನರ್ವಾ ವಿರುದ್ಧ ಲಾಜೊಂಗ್ ತಂಡಕ್ಕೆ ಜಯ
ಚಂಡಿಗಡ, ಜ.25: ಬದಲಿ ಆಟಗಾರ ನೋರೆಮ್ ಮಹೇಶ್‌ಸಿಂಗ್ ಕೊನೆಯ ಅವಧಿಯಲ್ಲಿ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಶಿಲ್ಲಾಂಗ್ ಲಾಜೊಂಗ್ ತಂಡ ಐ-ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಶುಕ್ರವಾರ ಹಾಲಿ ಚಾಂಪಿಯನ್ ಮಿನರ್ವಾ ಪಂಜಾಬ್ ತಂಡವನ್ನು 1-0 ಗೋಲಿನ ಅಂತರದಿಂದ ಬಗ್ಗುಬಡಿದಿದೆ.
ಲಾಜೊಂಗ್ ತಂಡದ ಪರ 84ನೇ ನಿಮಿಷದಲ್ಲ್ಲಿ ಗೋಲು ಗಳಿಸಿದ ಮಹೇಶ್ ಸಿಂಗ್, ಚಾಂಪಿಯನ್ ತಂಡವನ್ನು ಸೋಲಿಸಲು ನೆರವಾದರು. ಆದರೆ ಪಂದ್ಯದುದ್ದಕ್ಕೂ ಮಿಂಚಿದ್ದು ಲಾಜೊಂಗ್ ತಂಡದ ಗೋಲ್‌ಕೀಪರ್ ಫುರ್ಬ ಟೆಂಪಾ ಲಚೆನ್ಪಾ. ಈ ಸೋಲು ಮಿನೆರ್ವ ತಂಡದ ಸತತ 8ನೇ ಸೋಲಾಗಿ ಪರಿಣಮಿಸಿದೆ. ಆತಿಥೇಯ ಮಿನೆರ್ವ ತಂಡ ಗೋಲು ಗಳಿಸುವ ಹಲವು ಅವಕಾಶಗಳನ್ನು ಸೃಷ್ಟಿಸಿಕೊಂಡಿತಾದರೂ ಅವುಗಳಿಗೆ ಯಶಸ್ವಿ ಫಿನಿಶಿಂಗ್ ಟಚ್ ನೀಡಲು ವಿಫಲವಾಯಿತು. ಅಲ್ಲದೆ ಲಾಜೊಂಗ್ ತಂಡದ ಗೋಲ್‌ಕೀಪಿಂಗ್ ಅತ್ಯುತ್ತಮವಾಗಿದ್ದು ಮಿನರ್ವಾ ತಂಡದ ಹಿನ್ನಡೆಗೆ ಕಾರಣವಾಯಿತು.
ಮತ್ತೊಂದೆಡೆ ಶಿಲ್ಲಾಂಗ್ ತಂಡ ಕಡಿಮೆ ಅವಕಾಶ ಸೃಷ್ಟಿಸಿದರೂ ಆ ತಂಡ ಸೃಷ್ಟಿಸಿದ ದಾಳಿಗಳೆಲ್ಲವೂ ಸಂಘಟಿತವಾಗಿದ್ದವು. ಅವರಿಗೂ ಕೂಡ ಉತ್ತಮ ಫಿನಿಶ್‌ನ ಕಹಿ ಅನುಭವ ಕಾಡಿತು. ಮಿನರ್ವಾ ತಂಡದ ಹಲವು ಅವಕಾಶಗಳನ್ನು ಗೋಲ್‌ಕೀಪರ್ ಫುರ್ಬ ಟೆಂಪಾ ವಿಫಲಗೊಳಿಸಿದರು. ಅಂತಿಮವಾಗಿ 84ನೇ ನಿಮಿಷದಲ್ಲಿ ಮಿನರ್ವಾ ಗೋಲಿಯನ್ನು ವಂಚಿಸುವಲ್ಲಿ ಮಹೇಶ್ ಸಿಂಗ್ ಯಶಸ್ವಿಯಾದರು.