ಜಮ್ಮು-ಕಾಶ್ಮೀರ ಮೀಸಲಾತಿ(ತಿದ್ದುಪಡಿ) ಮಸೂದೆಗೆ ರಾಜ್ಯಪಾಲರ ಅಂಕಿತ

Update: 2019-01-25 18:24 GMT

ಶ್ರೀನಗರ, ಜ.25: ಪಹಾರಿ ಸಮುದಾಯದವರಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಒದಗಿಸುವ ಜಮ್ಮು-ಕಾಶ್ಮೀರ ಮೀಸಲಾತಿ(ತಿದ್ದುಪಡಿ) ಮಸೂದೆಗೆ ರಾಜ್ಯಪಾಲ ಸತ್ಯಪಾಲ ಮಲಿಕ್ ಸಹಿ ಹಾಕಿದ್ದಾರೆ. ಮೀಸಲಾತಿಗೆ ಅರ್ಹರಾಗುವವರನ್ನು ಗುರುತಿಸುವ ಪ್ರಕ್ರಿಯೆಯ ಬಗ್ಗೆ ಶೀಘ್ರವೇ ಅಧಿಸೂಚನೆ ಹೊರ ಬೀಳಲಿದೆ. ಎಸ್ಸಿ/ಎಸ್ಟಿ ಹೊರತುಪಡಿಸಿ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗವಾಗಿರುವ ಪಹಾರಿ ಸಮುದಾಯ ವಿಶಿಷ್ಟವಾದ ಸಾಂಸ್ಕೃತಿಕ, ಜನಾಂಗೀಯ ಮತ್ತು ಭಾಷಾ ಅನನ್ಯತೆಯನ್ನು ಹೊಂದಿದೆ. ದೂರದ, ದುರ್ಗಮ ಪ್ರದೇಶದ ನಿವಾಸಿಗಳಾಗಿರುವ ಪಹಾರಿ ಸಮುದಾಯವರಿಗೆ ಮೀಸಲಾತಿ ನೀಡಬೇಕೆಂಬುದು ಸುದೀರ್ಘ ಕಾಲದ ಬೇಡಿಕೆಯಾಗಿತ್ತು ಎಂದು ರಾಜಭವನದ ವಕ್ತಾರರು ತಿಳಿಸಿದ್ದಾರೆ.

ಮಸೂದೆಗೆ ರಾಜ್ಯಪಾಲರು ಸಹಿ ಹಾಕಿರುವುದನ್ನು ಸ್ವಾಗತಿಸಿರುವ ರಾಜ್ಯದ ಮಾಜಿ ವಿತ್ತಸಚಿವ ಸಯೀದ್ ಅಲ್ತಾಫ್ ಬುಖಾರಿ, ಬಹುಕಾಲದಿಂದ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಪಹಾರಿ ಸಮುದಾಯದ ನೆರವಿಗೆ ಬಂದಿರುವ ಸರಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರೂ ಇದನ್ನು ಸ್ವಾಗತಿಸಿದ್ದು, ತಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭ 2018ರ ಫೆಬ್ರವರಿಯಲ್ಲಿ ಈ ನಿರ್ಧಾರವನ್ನು ಸರಕಾರ ಕೈಗೊಂಡಿದ್ದು ಅದನ್ನು ರಾಜ್ಯಪಾಲರಿಗೆ ಕಳಿಸಿತ್ತು. ಇದಕ್ಕೆ ಸಹಿ ಹಾಕಿರುವುದಕ್ಕೆ ರಾಜ್ಯಪಾಲರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ. ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಸಜ್ಜನ್ ಗನಿ ಲೋನೆ ಕೂಡಾ ರಾಜ್ಯಪಾಲರಿಗೆ ಅಭಿನಂದನೆ ಸಲ್ಲಿಸಿದ್ದು ಹಲವು ದಶಕಗಳವರೆಗೆ ಅನ್ಯಾಯಕ್ಕೆ ಒಳಗಾಗಿದ್ದ ಪಹಾರಿ ಸಮುದಾಯದವರಿಗೆ ಕಡೆಗೂ ನ್ಯಾಯ ದೊರಕಿದೆ ಎಂದಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ರಾಜ್ಯ ಕಾರ್ಯದರ್ಶಿ, ಮಾಜಿ ಸಚಿವ ಮುಷ್ತಾಕ್ ಅಹ್ಮದ್ ಶಾ ಹಾಗೂ ಹಿರಿಯ ಮುಖಂಡ ರಚ್‌ಪಾಲ್ ಸಿಂಗ್ ಅವರೂ ಮಸೂದೆಗೆ ಸಹಿ ಹಾಕಿರುವುದನ್ನು ಸ್ವಾಗತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News