ಇಮಾಮ್ ಶತಕ ವ್ಯರ್ಥ ದ. ಆಫ್ರಿಕಕ್ಕೆ ಗೆಲುವು
ಸೆಂಚೂರಿಯನ್, ಜ.26: ಶತಕ ಸಿಡಿಸಿದ ಇಮಾಮ್‌ವುಲ್ ಹಕ್ ಟೀಕಾಕಾರರಿಗೆ ಪ್ರಬಲ ಸಂದೇಶ ರವಾನಿಸಿದರು. ಆದಾಗ್ಯೂ ಅವರಿಗೆ ಮಳೆಬಾಧಿತ ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಪಾಕ್ ತಂಡವನ್ನು ಸೋಲಿನಿಂದ ಪಾರಾಗಿಸಲು ಸಾಧ್ಯವಾಗಲಿಲ್ಲ.
ಶುಕ್ರವಾರ ನಡೆದ ಪಂದ್ಯದಲ್ಲಿ ಪಾಕ್ ತಂಡ ಇಮಾಮ್ ಶತಕದ(101)ನೆರವಿನಿಂದ 6 ವಿಕೆಟ್ ನಷ್ಟಕ್ಕೆ 317 ರನ್ ಗಳಿಸಿತ್ತು. ಇದಕ್ಕೆ ಉತ್ತರಿಸಹೊರಟ ದ.ಆಫ್ರಿಕಕ್ಕೆ ಮಳೆ ಎರಡು ಬಾರಿ ಅಡ್ಡಿಪಡಿಸಿತು. ಅಂತಿಮವಾಗಿ ಆಫ್ರಿಕ ತಂಡ ಡಕ್‌ವರ್ತ್‌ಲೂಯಿಸ್ ನಿಯಮದ ಪ್ರಕಾರ 13 ರನ್‌ನಿಂದ ಪಂದ್ಯ ಜಯಿಸಿತು.
ಎರಡನೇ ಬಾರಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದಾಗ ದ.ಆಫ್ರಿಕ 33 ಓವರ್‌ಗಳಲ್ಲಿ 2 ವಿಕೆಟ್‌ಗೆ 187 ರನ್ ಗಳಿಸಿತ್ತು. ಡಿಎಲ್ ನಿಯಮ ಪ್ರಕಾರ 33ನೇ ಓವರ್‌ನಲ್ಲಿ ಆಫ್ರಿಕ 174 ರನ್ ಗಳಿಸಬೇಕಾಗಿತ್ತು. ಆಫ್ರಿಕ ರನ್ ಗಳಿಕೆಯಲ್ಲಿ ಮುಂದಿದ್ದ ಕಾರಣ ವಿಜಯಿಯಾಗಿ ಹೊರ ಹೊಮ್ಮಿತು. ಆಗ ರೀಝಾ ಹೆಂಡ್ರಿಕ್ಸ್ ಹಾಗೂ ಎಫ್‌ಡು ಪ್ಲೆಸಿಸ್ ಕ್ರಮವಾಗಿ 83 ಹಾಗೂ 40 ರನ್ ಗಳಿಸಿದ್ದರು.
ಇಮಾಮ್ ತನ್ನ 19ನೇ ಏಕದಿನ ಪಂದ್ಯದಲ್ಲಿ 5ನೇ ಶತಕ ಸಿಡಿಸಿ ಗಮನ ಸೆಳೆದರು. ಬಾಬರ್ ಆಝಮ್(69)ರೊಂದಿಗೆ 2ನೇ ವಿಕೆಟ್‌ಗೆ 132 ರನ್ ಜೊತೆಯಾಟ ನಡೆಸಿದ ಇಮಾಮ್, ಮುಹಮ್ಮದ್ ಹಫೀಝ್(52) ಅವರೊಂದಿಗೆ 3ನೇ ವಿಕೆಟ್‌ಗೆ 84 ರನ್ ಸೇರಿಸಿದರು. ಇಮಾಮ್ ತನ್ನ 19ನೇ ಇನಿಂಗ್ಸ್‌ನಲ್ಲಿ 1,000 ರನ್ ಪೂರೈಸಿದರು. ದ.ಆಫ್ರಿಕ ಫೀಲ್ಡಿಂಗ್‌ನಲ್ಲಿ ಕಳಪೆ ನಿರ್ವಹಣೆ ತೋರಿದ್ದು, ಐದು ಕ್ಯಾಚ್‌ಗಳನ್ನು ಕೈಚೆಲ್ಲಿತು. ಪಾಕ್‌ನ ಎಲ್ಲ ಐವರು ಅಗ್ರ ಸರದಿ ದಾಂಡಿಗರು ಜೀವದಾನ ಪಡೆದರು. ಇನಿಂಗ್ಸ್‌ನಲ್ಲಿ 12 ವೈಡ್‌ಗಳಿದ್ದವು. 50 ಓವರ್ ಬೌಲಿಂಗ್ ಪೂರ್ಣಗೊಳಿಸಲು ಹೆಚ್ಚುವರಿ 20 ನಿಮಿಷ ತೆಗೆದುಕೊಂಡಿತು.ದ.ಆಫ್ರಿಕ ಬ್ಯಾಟಿಂಗ್‌ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ಹಾಶಿಮ್ ಅಮ್ಲ ಮೊದಲ ವಿಕೆಟ್‌ಗೆ 53 ರನ್ ಸೇರಿಸಿ ಬಿರುಸಿನ ಆರಂಭ ನೀಡಿದ್ದರು. ಮೊದಲ ಬಾರಿ ಮಳೆ ಅಡ್ಡಿಪಡಿಸುವ ಮೊದಲು ಇಬ್ಬರು ಔಟಾದರು. ಆಗ ತಂಡದ ಮೊತ್ತ 2ಕ್ಕೆ 88. ಪಂದ್ಯಶ್ರೇಷ್ಠ ಹೆಂಡ್ರಿಕ್ಸ್ ಹಾಗೂ ಡು ಪ್ಲೆಸಿಸ್ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಮಳೆ ಮತ್ತಷ್ಟು ಜೋರಾಗಿ ಸುರಿಯಲಾರಂಭಿಸಿದಾಗ ಪಂದ್ಯ ಸ್ಥಗಿತಗೊಂಡಿತು.