×
Ad

ಎಟಿಪಿ ರ‍್ಯಾಂಕಿಂಗ್: ಅಗ್ರಸ್ಥಾನದಲ್ಲಿ ಜೊಕೊವಿಕ್

Update: 2019-01-28 23:38 IST

ಪ್ಯಾರಿಸ್, ಜ.28: ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಬಲಿಷ್ಠ ಎದುರಾಳಿ ರಫೆಲ್ ನಡಾಲ್‌ರನ್ನು ಮಣಿಸಿದ ಸರ್ಬಿಯ ಆಟಗಾರ ನೊವಾಕ್ ಜೊಕೊವಿಕ್ ನೂತನ ಎಟಿಪಿ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದ್ದಾರೆ.

ಎರಡು ಗಂಟೆಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ ನೇರ ಗೇಮ್‌ಗಳಿಂದ ಸೋತ ನಡಾಲ್ 2ನೇ ಸ್ಥಾನದಲ್ಲಿದ್ದು, 3ನೇ ಸ್ಥಾನದಲ್ಲಿದ್ದ ಇನ್ನೋರ್ವ ಖ್ಯಾತ ಆಟಗಾರ ಸ್ವಿಸ್‌ನ ರೋಜರ್ ಫೆಡರರ್ 6ನೇ ಸ್ಥಾನಕ್ಕೆ ಜಾರಿದ್ದಾರೆ. ಆಸ್ಟ್ರೇಲಿಯನ್ ಓಪನ್‌ನಲ್ಲಿ ದೈತ್ಯ ಸಂಹಾರಿ ಸ್ಟೆಪನೋಸ್ ಸಿಟ್ಸಿಪಾಸ್ ವಿರುದ್ಧ 16ನೇ ಸುತ್ತಿನ ಪಂದ್ಯದಲ್ಲಿ ಸೋತು ಫೆಡರರ್ ತಮ್ಮ ಅಭಿಯಾನ ಕೊನೆಗೊಳಿಸಿದ್ದರು. ಯುವ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ 3ನೇ ಸ್ಥಾನ ಅಲಂಕರಿಸಿದ್ದು, ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ 4ನೇ ಸ್ಥಾನದಲ್ಲಿದ್ದಾರೆ. ಮೆಲ್ಬೋರ್ನ್‌ನಲ್ಲಿ ಆರಂಭದಲ್ಲೇ ಹೊರಬಿದ್ದರೂ ದ. ಆಫ್ರಿಕದ ಕೆವಿನ್ ಆ್ಯಂಡರ್ಸನ್ 5ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಜಪಾನ್‌ನ ನಿಶಿಕೋರಿ 7ನೇ ಸ್ಥಾನ ಹಾಗೂ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್‌ನಲ್ಲಿ ಸೋತ ಸಿಟ್ಸಿಪಾಸ್ 12ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News