6 ಕೊಲ್ಲಿ ರಾಷ್ಟ್ರಗಳಿಂದ ಪಾರ್ಥಿವ ಶರೀರ ಹಿಂದೆ ತರಲು ‘ಅತ್ಯಂತ ಕಡಿಮೆ ದರ’ ವಿಧಿಸಲಿರುವ ಏರ್ ಇಂಡಿಯಾ

Update: 2019-01-28 18:21 GMT

ಹೊಸದಿಲ್ಲಿ, ಜ. 28: ಭಾರತೀಯ ವಲಸಿಗರು ಗಮನಾರ್ಹ ಸಂಖ್ಯೆಯಲ್ಲಿ ಇರುವ 6 ಕೊಲ್ಲಿ ರಾಷ್ಟ್ರಗಳಿಂದ ಪಾರ್ಥಿವ ಶರೀರವನ್ನು ವಿಮಾನದ ಮೂಲಕ ಭಾರತಕ್ಕೆ ಹಿಂದೆ ತರಲು ‘ಅತ್ಯಂತ ಕಡಿಮೆ ದರ’ ವಿಧಿಸಲು ಏರ್ ಇಂಡಿಯಾ ನಿರ್ಧರಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ನಾಗರಿಕ ವಿಮಾನ ಯಾನ ಸಚಿವಾಲಯದೊಂದಿಗೆ ಚರ್ಚೆ ನಡೆಸಿದ ಬಳಿಕ 6 ಕೊಲ್ಲಿ ರಾಷ್ಟ್ರಗಳಿಂದ ಮೃತದೇಹಗಳನ್ನು ಹಿಂದೆ ತರಲು ‘ಅತ್ಯಂತ ಕಡಿಮೆ ದರ’ ವಿಧಿಸಲು ನಾವು ನಿರ್ಧರಿಸಿದ್ದೇವೆ. ಈ ‘ಅತ್ಯಂತ ಕಡಿಮೆ ದರ’ ಸಾಮಾನ್ಯವಾಗಿ ವಿಧಿಸುವ ಶುಲ್ಕಕ್ಕಿಂತ ಶೇ. 40ರಷ್ಟು ಕಡಿಮೆ ಎಂದು ಏರ್ ಇಂಡಿಯಾದ ಹಿರಿಯ ಅಧಿಕಾರಿ ಸೋಮವಾರ ತಿಳಿಸಿದ್ದಾರೆ.

ಪ್ರಸ್ತುತ 6 ದೇಶಗಳಿಂದ ಪಾರ್ಥಿವ ಶರೀರವನ್ನು ಹಿಂದೆ ತರುವಾಗ ಈ ‘ಅತ್ಯಂತ ಕಡಿಮೆ ದರ ಸೇವೆ’ ದೊರೆಯಲಿದೆ. ಪಾರ್ಥಿವ ಶರೀರವನ್ನು ಭಾರತಕ್ಕೆ ಹಿಂದಕ್ಕೆ ತರುವುದಾದರೆ ಯುಎಇಯಿಂದ 1,500 ದಿರ್ಹಮ್, ಸೌದಿ ಅರೇಬಿಯಾದಿಂದ 220 ಸೌದಿ ರಿಯಲ್, ಕತಾರ್‌ನಿಂದ 2,200 ಕತಾರಿ ರಿಯಲ್, ಬಹ್ರೈನ್‌ನಿಂದ 225 ಬಹ್ರೈನ್ ದಿನಾರ್, ಒಮನ್‌ನಿಂದ 160 ಒಮನಿ ರಿಯಲ್ ಹಾಗೂ ಕುವೈತ್‌ನಿಂದ 175 ಕುವೈತ್ ದಿನಾರ್ ಆಗಲಿದೆ ಎಂದು ಅವರು ತಿಳಿಸಿದ್ದಾರೆ. ಪ್ರಸಕ್ತ ವಿನಿಮಯ ದರದ ಪ್ರಕಾರ ಈ ‘ಅತ್ಯಂತ ಕಡಿಮೆ ದರ’ ಸರಿಸುಮಾರು ಭಾರತೀಯ ಕರೆನ್ಸಿಯಲ್ಲಿ ಯುಎಇಯಿಂದ ರೂ. 29,000, ಸೌದಿ ಅರೇಬಿಯಾದಿಂದ ರೂ. 41,800, ಖತಾರ್‌ನಿಂದ ರೂ. 43,000, ಬಹ್ರೈನ್‌ನಿಂದ ರೂ. 42,500, ಒಮನ್‌ನಿಂದ ರೂ. 29,500 ಹಾಗೂ ಕುವೈತ್‌ನಿಂದ ರೂ. 40,900 ಆಗಲಿದೆ. ಈ ಸೇವೆಯನ್ನು ವಲಸಿಗ ಭಾರತಿಯರು ಗಮನಾರ್ಹ ಸಂಖ್ಯೆಯಲ್ಲಿ ಇರುವ ಇತರ ರಾಷ್ಟ್ರಗಳಿಗೆ ಕೂಡ ವಿಸ್ತರಿಸಲಾಗುವುದು ಎಂದು ಏರ್ ಇಂಡಿಯಾದ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News