ಮುಂಬೈ ಉಗ್ರರ ದಾಳಿ: ಇಬ್ಬರು ಪಾಕ್ ಸೇನಾ ಮೇಜರ್ ಗಳ ವಿರುದ್ಧ ಜಾಮೀನುರಹಿತ ವಾರಂಟ್
ಮುಂಬೈ,ಫೆ.3: 26/11ರ ಮುಂಬೈ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಸೆಶನ್ಸ್ ನ್ಯಾಯಾಲಯ ಪಾಕಿಸ್ತಾನದ ಇಬ್ಬರು ಸೇನಾ ಮೇಜರ್ ಗಳ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿ ಮಾಡಿದೆ.
ಪಾಕಿಸ್ತಾನ ಸೇನಾ ಮೇಜರ್‌ಗಳಾದ ಅಬ್ದುಲ್ ರಹಮಾನ್ ಪಾಶಾ ಮತ್ತು ಇಕ್ಬಾಲ್ ವಿರುದ್ಧ ಈ ವಾರಂಟ್ ಜಾರಿ ಮಾಡಲಾಗಿದೆ. ಅಬ್ದುಲ್ ರಹಮಾನ್ ಪಾಶಾ ಸದ್ಯ ಸೇನೆಯಿಂದ ನಿವೃತ್ತಿ ಹೊಂದಿದ್ದರೆ ಮೇಜರ್ ಇಕ್ಬಾಲ್ ಈಗಲೂ ಐಎಸ್‌ಐ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಕರಣದಲ್ಲಿ ಸಾಕ್ಷಿದಾರನಾಗಿರುವ ಲಷ್ಕರೆ ತೈಬಾದ ಅಮೆರಿಕ ಮೂಲದ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿ ನೀಡಿರುವ ಹೇಳಿಕೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಮುಂಬೈ ಕ್ರೈಂ ಬ್ರಾಂಚ್ ಸಿದ್ಧಪಡಿಸಿದ್ದ ದೋಷಾರೋಪಣೆಯಲ್ಲಿ ಇಕ್ಬಾಲ್ ಮತ್ತು ಪಾಶಾರನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಪಾಕ್ ಮೇಜರ್‌ಗಳ ವಿರುದ್ಧ ಜಾಮೀನುರಹಿತ ವಾರಂಟ್‌ಗೆ ಮನವಿ ಮಾಡಿ ಜನವರಿ 21ರಂದು ವಿಶೇಷ ಸಾರ್ವಜನಿಕ ಅಭಿಯೋಜಕ ಉಜ್ವಲ್ ನಿಕಮ್ ಅರ್ಜಿ ಸಲ್ಲಿಸಲು ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಎಸ್.ವಿ ಯರ್ಲಗಡ್ಡ ಅನುಮತಿ ನೀಡಿದ್ದರು. ಈ ಅರ್ಜಿಯನ್ನು 26/11ರ ಮುಂಬೈ ದಾಳಿ ಪ್ರಕರಣದಲ್ಲಿ ಎಲ್‌ಇಟಿ ಉಗ್ರ ಅಬು ಜುಂದಾಲ್‌ನ ವಿಚಾರಣೆ ನಡೆಸುವ ನ್ಯಾಯಾಲಯದ ಮುಂದೆ ದಾಖಲಿಸಲಾಗಿತ್ತು.
ಕ್ರೈಬ್ರಾಂಚ್ ಸಲ್ಲಿಸಿದ್ದ ಪೂರಕ ದೋಷರೋಪ ಮತ್ತು ನಿಕಮ್ ಅವರ ವಾದವನ್ನು ಆಲಿಸಿದ ನಂತರ ನ್ಯಾಯಾಧೀಶರು ಈ ಅರ್ಜಿಯನ್ನು ಹಾಕಲು ಅವಕಾಶ ನೀಡಿದ್ದರು. ಸರಕಾರಿ ಸಾಕ್ಷಿದಾರ ಡೇವಿಡ್ ಹೆಡ್ಲಿ ಈ ಇಬ್ಬರು ಪಾಕ್ ಮೇಜರ್‌ಗಳನ್ನು ತನ್ನ ಹೇಳಿಕೆಯಲ್ಲಿ ಹೆಸರಿಸಿರುವ ಕಾರಣ ಅವರ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸುವ ಅರ್ಜಿಗೆ ಅನುಮತಿ ನೀಡಲಾಗಿದೆ ಎಂದು ನ್ಯಾಯಾಧೀಶರು ತಿಳಿಸಿದ್ದರು. ಸದ್ಯ ಅಮೆರಿಕದ ಜೈಲಿನಲ್ಲಿ ಬಂಧಿಯಾಗಿರುವ ಡೇವಿಡ್ ಹೆಡ್ಲಿ ಈ ಪ್ರಕರಣದಲ್ಲಿ ಸರಕಾರಿ ಸಾಕ್ಷಿದಾರನಾಗಲು ಒಪ್ಪಿಕೊಂಡಿದ್ದ ಮತ್ತು ಆತನ ಹೇಳಿಕೆಯನ್ನು 2016ರಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ದಾಖಲಿಸಲಾಗಿತ್ತು.