ರಾಜ್‌ನಾಥ್ ಸಿಂಗ್‌ರಿಂದ ಪೂರಕ ಪ್ರತಿಕ್ರಿಯೆ: ಮೇಘಾಲಯ ಮುಖ್ಯಮಂತ್ರಿ
ಶಿಲಾಂಗ್,ಫೆ.3: ಪೌರತ್ವ ತಿದ್ದುಪಡಿ ಮಸೂದೆ, 2016ಕ್ಕೆ ಸಂಬಂಧಪಟ್ಟಂತೆ ನಡೆದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪೂರಕ ಪ್ರತಿಕ್ರಿಯೆ ನೀಡಿರುವುದಾಗಿ ಮೇಘಾಲಯ ಮುಖ್ಯಮಂತ್ರಿ ಕೊನ್ರಡ್ ಸಂಗ್ಮಾ ತಿಳಿಸಿದ್ದಾರೆ. ಪೌರತ್ವ ಮಸೂದೆ ಸಂಬಂಧ ಇತರ ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಂಗ್ಮಾ ರವಿವಾರ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ.
ಪ್ರಸ್ತಾವಿತ ಮಸೂದೆಗೆ ಬಹುತೇಕ ಈಶಾನ್ಯ ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಈ ಸಂಬಂಧ ಜನವರಿ 29ರಂದು ಗುವಾಹಟಿಯಲ್ಲಿ ಸಭೆ ಸೇರಿದ್ದ ಸಂಯುಕ್ತ ಜನತಾದಳ ಮತ್ತು ಹತ್ತು ಪ್ರಾದೇಶಿಕ ಪಕ್ಷಗಳು ಈ ಮಸೂದೆಯನ್ನು ಅವಿರೋಧವಾಗಿ ಮತ್ತು ಒಟ್ಟಿಗೆ ವಿರೋಧಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದವು.
ಈ ಸಭೆಯಲ್ಲಿ ಸಂಗ್ಮಾರ ನ್ಯಾಶನಲ್ ಪೀಪಲ್ಸ್ ಪಾರ್ಟಿ ಸೇರಿದಂತೆ ಬಿಜೆಪಿ ಜೊತೆ ಮೈತ್ರಿ ಹೊಂದಿರುವ ಹಲವು ಪಕ್ಷಗಳು ಭಾಗಿಯಾಗಿದ್ದವು. ಗೃಹಸಚಿವರು ಈಶಾನ್ಯ ಭಾಗದ ಜನರ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಈ ವಿಷಯವು ರಾಷ್ಟ್ರೀಯ ಮಟ್ಟದಲ್ಲಿ ಬಹಳ ಪ್ರಮುಖವಾದುದು ಎಂದು ಅವರು ತಿಳಿಸಿದ್ದಾರೆ ಎಂದು ಸಂಗ್ಮಾ ವಿವರಿಸಿದ್ದಾರೆ. ಕರಡು ಮಸೂದೆಯ ಬಗ್ಗೆ ಇತರ ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಸಂಸ್ಥೆಗಳ ಜೊತೆ ಚರ್ಚೆ ನಡೆಸುವುದಾಗಿ ಸಿಂಗ್ ಭರವಸೆ ನೀಡಿದ್ದಾರೆ. ಎಲ್ಲರ ಜೊತೆ ಸಮಾಲೋಚನೆ ನಡೆಸಿದ ನಂತರವೇ ಈ ಮಸೂದೆಯಲ್ಲಿ ಮುಂದಿನ ಹೆಜ್ಜೆಯಿಡುವುದಾಗಿ ತಿಳಿಸಿರುವುದು ಒಂದು ಗುಣಾತ್ಮಕ ಸೂಚನೆಯಾಗಿದೆ ಎಂದು ಸಂಗ್ಮಾ ತಿಳಿಸಿದ್ದಾರೆ.