ಯಾವುದೇ ಯೋಜನೆಗೆ ಕೇಂದ್ರದಿಂದ ಹಣ ಸ್ವೀಕರಿಸುವುದಿಲ್ಲ: ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಫೆ. 4: ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಇಲ್ಲಿ ಮಂಗಳವಾರ ಕೂಡ ‘ಸಂವಿಧಾನ ಉಳಿಸಿ’ ಧರಣಿ ಮುಂದುವರಿಸಿರುವ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ನನ್ನ ಸರಕಾರದ ಯಾವುದೇ ಯೋಜನೆಗೆ ಕೇಂದ್ರ ಸರಕಾರದಿಂದ ಹಣ ಸ್ವೀಕರಿಸುವುದಿಲ್ಲ” ಎಂದಿದ್ದಾರೆ.
ಕೋಲ್ಕತ್ತಾದ ಮೆಟ್ರೊ ಚಾನಲ್ ಸ್ಟೇಶನ್‌ನಲ್ಲಿ ಧರಣಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ಮೋದಿ ಸರಕಾರ ರೈತರ ಹಕ್ಕುಗಳನ್ನು ಕಸಿದುಕೊಂಡಿದೆ. ಒಟ್ಟು 12 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡರು. ರೈತರ ಭೂಮಿ ಕಸಿದುಕೊಳ್ಳಲಾಯಿತು. 2006ರಲ್ಲಿ ನಾನು ರೈತರ ಭೂಮಿ ಹಿಂದಿರುಗಿಸುವಂತೆ 27 ದಿನಗಳ ಕಾಲ ಧರಣಿ ಕುಳಿತಿದ್ದೆ. ರೈತರ ಹಕ್ಕುಗಳನ್ನು ಕಸಿದುಕೊಳ್ಳದೇ ಇರುವ ಏಕೈಕ ಸರಕಾರ ನಮ್ಮದು ಎಂದು ಮಮತಾ ಬ್ಯಾನರ್ಜಿ ಹೇಳಿದರು.
ರೈತರು ಒಂದು ವರ್ಷಕ್ಕೆ 5000 ರೂ. ಪಡೆಯುವ ಕೃಷಿ ಬಂಧುವಂತಹ ಯೋಜನೆಗಳನ್ನು ನಾವು ಆರಂಭಿಸಿದ್ದೇವೆ. ನಾವು ಈಗಾಗಲೇ 30,000 ಚೆಕ್‌ಗಳನ್ನು ವಿತರಿಸಿದ್ದೇವೆ. ಬಂಗಾಳ ಫಸಲ್ ಬೀಮಾ ಯೋಜನೆಯಲ್ಲಿ ಶೇ. 80 ಪ್ರೀಮಿಯಂ ಅನ್ನು ರಾಜ್ಯ ಸರಕಾರ ನೀಡುತ್ತದೆ. ನಮ್ಮಲ್ಲಿ ಕೃಷಿ ಪಿಂಚಣಿ ಇದೆ. ಈ ಪಿಂಚಣಿ ಅಡಿಯಲ್ಲಿ ರೈತರಿಗೆ ಒಂದು ತಿಂಗಳಿಗೆ ಸಾವಿರ ರೂ. ನೀಡಲಾಗುತ್ತದೆ ಎಂದು ಅವರು ಹೇಳಿದರು. ಜ್ಞಾಪನಾ ಪತ್ರಕ್ಕೆ ಸರ್ವ ಪ್ರತಿಪಕ್ಷಗಳ ಸದಸ್ಯರು ಸಹಿ ಹಾಕಿದ್ದಾರೆ ಹಾಗೂ ಚುನಾವಣಾ ಆಯೋಗಕ್ಕೆ ಸಲ್ಲಿಸಲಿದ್ದೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.