ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಆಧಾರ್ ಕಡ್ಡಾಯವಲ್ಲ

Update: 2019-02-04 17:17 GMT

ಹೊಸದಿಲ್ಲಿ,ಫೆ.4: ಇತ್ತೀಚಿನ ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಲಾದ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಮೊದಲ ಕಂತಿನ 2,000 ರೂ. ಬಿಡುಗಡೆಗೆ ಸಣ್ಣ ಮತ್ತು ಸೀಮಿತ ರೈತರು ಆಧಾರ್ ನೀಡುವುದು ಕಡ್ಡಾಯವಲ್ಲ ಎಂದು ಕೇಂದ್ರ ಸರಕಾರ ತಿಳಿಸಿದೆ.

ಆದರೆ ಮುಂದಿನ ಕಂತಿನ ಹಣವನ್ನು ಪಡೆಯಲು ರೈತರು ತಮ್ಮ ಗುರುತನ್ನು ದೃಢೀಕರಿಸಲು ಆಧಾರ್ ನೀಡುವುದು ಕಡ್ಡಾಯವೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ವಿತ್ತ ಸಚಿವ ಪಿಯೂಶ್ ಗೋಯಲ್ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಎರಡು ಹೆಕ್ಟೆರ್‌ವರೆಗೆ ಜಮೀನು ಹೊಂದಿರುವ ದೇಶದ 12 ಕೋಟಿ ರೈತರಿಗೆ ವಾರ್ಷಿಕ 6,000ರೂ. ನೇರ ನಗದು ನೀಡುವ ಘೋಷಣೆಯನ್ನು ಮಾಡಿದ್ದರು. ಸಂಪೂರ್ಣವಾಗಿ ಕೇಂದ್ರ ಸರಕಾರದಿಂದ ಭರಿಸಲಾಗುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಈ ವರ್ಷದಿಂದ ಜಾರಿಗೆ ಬರಲಿದ್ದು ಮಾರ್ಚ್‌ನಲ್ಲಿ ಮೊದಲ ಕಂತಿನ ಹಣ ಬಿಡುಗಡೆಯಾಗಲಿದೆ.

2018ರ ಡಿಸೆಂಬರ್‌ನಿಂದ 2019ರ ಮಾರ್ಚ್‌ವರೆಗಿನ ಅವಧಿಯ ಮೊದಲ ಕಂತಿನ ಹಣದ ವರ್ಗಾವಣೆಗೆ ಲಭ್ಯವಿದ್ದರೆ ಮಾತ್ರ ಆಧಾರ್ ಪಡೆಯಲಾಗುವುದು. ಇಲ್ಲದಿದ್ದರೆ ಇತರೆ ಗುರುತಿನ ಚೀಟಿಗಳಾದ ಚಾಲನಾ ಪರವಾನಿಗೆ, ಮತದಾರರ ಗುರುತಿನ ಚೀಟಿ, ನರೆಗ ಉದ್ಯೋಗ ಪತ್ರ ಅಥವಾ ಕೇಂದ್ರ/ರಾಜ್ಯ ಸರಕಾರಗಳ ಅಥವಾ ಸಂಸ್ಥೆಗಳ ಗುರುತಿನ ಚೀಟಿಯನ್ನು ನೀಡಿದರೆ ಸಾಕು ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ. ಆದರೆ ಮುಂದಿನ ಕಂತುಗಳ ಹಣವನ್ನು ಪಡೆಯಲು ಫಲಾನುಭವಿಗಳು ಆಧಾರ್ ಒದಗಿಸುವುದು ಕಡ್ಡಾಯವಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News