ಜರ್ಮನಿ ಲೀಗ್‌ನಲ್ಲಿ ಬಜರಂಗ್ ಗೆಲುವಿನ ಆರಂಭ

Update: 2019-02-06 17:54 GMT

ಹೊಸದಿಲ್ಲಿ, ಫೆ.6: ಭಾರತದ ತಾರಾ ಕುಸ್ತಿಪಟು ಬಜರಂಗ್ ಪೂನಿಯ ಜರ್ಮನಿಯ ವೃತ್ತಿಪರ ಲೀಗ್ ‘ದ ಡ್ಯುಚ್ ರಿಂಗರ್ ಲಿಗಾ’’ನಲ್ಲಿ ಮೊದಲ ಬಾರಿ ಸ್ಪರ್ಧಿಸಿ ಗೆಲುವಿನ ಶುಭಾರಂಭ ಮಾಡಿದ್ದಾರೆ. ಆ ಮೂಲಕ 24 ವರ್ಷದ ಪೂನಿಯ ಜರ್ಮನಿ ಲೀಗ್‌ನಲ್ಲಿ ಭಾಗವಹಿಸಿದ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ವಿಎಫ್‌ಕೆ 07 ಸ್ಕಿಫ್ಫರ್‌ಸ್ಟ್‌ಡಾಟ್ ತಂಡದ ಪರ ಆಡಿದ ಅವರು ಲೀಗ್ ಫೈನಲ್ಸ್‌ನ ಪ್ರಥಮ ಸುತ್ತಿನಲ್ಲಿ ಎಸ್‌ವಿ ಜರ್ಮೇನಿಯ ವೈಂಗಾರ್ಟನ್ ತಂಡದ ಅಲೆಜಾಂಡ್ರೊ ವಾಲ್ಡೆಸ್ ಟೊಬಿಯರ್ ಅವರನ್ನು 17-2 ಅಂಕಗಳ ಅಂತರದಿಂದ ಮಣಿಸಿದರು. 67 ಕೆ.ಜಿ. ವಿಭಾಗದಲ್ಲಿ ಬಜರಂಗ್ ಸ್ಪರ್ಧಿಸುತ್ತಿದ್ದಾರೆ.

‘‘ಗೆಲುವಿನಾರಂಭ ದೊರೆತ್ತಿರುವುದಕ್ಕೆ ಖುಷಿಯಾಗಿದೆ. ಚೊಚ್ಚಲ ಪಂದ್ಯದಲ್ಲಿ ಗೆಲ್ಲುವುದು ಅತ್ಯುತ್ತಮ ಅನುಭವ. ಬೆಂಬಲ ನೀಡಿದ ಕೋಚ್ ಶಾಕೊ ಬೆಂಟಿನಿಡಿಸ್‌ಗೆ ಧನ್ಯವಾದ ಅರ್ಪಿಸುತ್ತೇನೆ’’ ಎಂದು ಪಂದ್ಯದ ನಂತರ ಬಜರಂಗ್ ಪ್ರತಿಕ್ರಿಯಿಸಿದ್ದಾರೆ.

ಜಾರ್ಜಿಯಾದ ಬೆಂಟಿನಿಡಿಸ್ ಅವರು ಬಜರಂಗ್ ಜರ್ಮನಿ ಲೀಗ್‌ನಲ್ಲಿ ಭಾಗವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಫೈನಲ್ಸ್‌ನ ಎರಡನೇ ಸುತ್ತಿನ ಪಂದ್ಯ ಫೆ.9ರಂದು ವೈಂಗಾರ್ಟನ್‌ನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News