ಬೆನ್ನು ನೋವು: ಖತರ್ ಓಪನ್‌ನಿಂದ ಹಿಂದೆ ಸರಿದ ನವೊಮಿ ಒಸಾಕಾ
Update: 2019-02-06 23:26 IST
ಟೋಕಿಯೊ, ಫೆ.6: ಬೆನ್ನುನೋವಿನ ಕಾರಣ ಮುಂದಿನ ವಾರ ಆರಂಭವಾಗಲಿರುವ ಖತರ್ ಓಪನ್‌ನಿಂದ ಹಿಂದೆ ಸರಿಯುತ್ತಿರುವುದಾಗಿ ವಿಶ್ವ ನಂ.1 ಟೆನಿಸ್ ಆಟಗಾರ್ತಿ ಜಪಾನ್‌ನ ನವೊಮಿ ಒಸಾಕಾ ಹೇಳಿದ್ದಾರೆ.
ಆಸ್ಟ್ರೇಲಿಯನ್ ಓಪನ್ ವಿಜಯದ ನಂತರ ಪ್ರಥಮ ಬಾರಿ ಕಣಕ್ಕಿಳಿಯಲು ಸಜ್ಜಾಗಿದ್ದ ಒಸಾಕಾ ಅಪರೂಪದ ಬೆನ್ನು ನೋವಿನಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ.‘‘ಅಲ್ಲಿನ ನನ್ನ ಅಭಿಮಾನಿಗಳನ್ನು ನೋಡಲು ಹಾಗೂ ಅಲ್ಲಿ ಸ್ಪರ್ಧಿಸಲು ಮನಸ್ಸಿದ್ದರೂ ಈ ವರ್ಷ ದೋಹಾ ಗೇಮ್‌ನಿಂದ ಹಿಂದೆ ಸರಿಯುತ್ತಿರುವುದಕ್ಕೆ ಕ್ಷಮೆಯಿರಲಿ. ಎಲ್ಲರಿಗೂ ಒಳ್ಳೆಯದಾಗಲಿ. ಪ್ರತಿಯೊಬ್ಬರನ್ನೂ ಮುಂದಿನ ವರ್ಷ ಭೆೇಟಿಯಾಗುವ ವಿಶ್ವಾಸವಿದೆ’’ ಎಂದು 21 ವರ್ಷದ ಒಸಾಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಫೆ.11ರಿಂದ ಆರಂಭವಾಗಲಿರುವ ಖತರ್ ಓಪನ್‌ನಲ್ಲಿ ವಿಶ್ವದ ನಂ.2 ಆಟಗಾರ್ತಿ ರೊಮಾನಿಯದ ಸಿಮೊನಾ ಹಾಲೆಪ್, ಕರೊಲಿನಾ ಪ್ಲಿಸ್ಕೋವಾ ಹಾಗೂ ಆ್ಯಂಜೆಲಿಕ್ ಕೆರ್ಬರ್ ಸ್ಪರ್ಧಿಸಲಿದ್ದಾರೆ.