ಭಾರತ ಪ್ರವಾಸಕ್ಕೆ ಆಸೀಸ್ ತಂಡ ಪ್ರಕಟ
ಮೆಲ್ಬೋರ್ನ್, ಫೆ.7: ಭಾರತ ತಂಡದ ವಿರುದ್ಧ ಭಾರತದಲ್ಲೇ ಆಡಲಾಗುವ ಏಕದಿನ ಹಾಗೂ ಟಿ20 ಪಂದ್ಯಗಳಿಂದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಹೊರಗುಳಿಯಲಿದ್ದಾರೆ. ‘‘ಗಂಭೀರ’’ ಸ್ನಾಯು ಸೆಳೆತದಿಂದ ಅವರು ಬಳಲುತ್ತಿದ್ದಾರೆ ಎನ್ನಲಾಗಿದೆ. ಇನ್ನೋರ್ವ ವೇಗಿ ಜೋಶ್ ಹೆಝಲ್‌ವುಡ್‌ಗೂ ಗಾಯದ ಕಾರಣ ಸ್ಥಾನ ಕಲ್ಪಿಸಿಲ್ಲ. ಭಾರತದ ವಿರುದ್ಧ ಎರಡು ಟಿ20 ಹಾಗೂ 5 ಏಕದಿನ ಪಂದ್ಯಗಳನ್ನು ಆಡಲಿರುವ ಆಸ್ಟ್ರೇಲಿಯ ತಂಡ ಈ ವರ್ಷ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ವಿಶ್ವಕಪ್ ಪಂದ್ಯಾವಳಿಗೆ ಬಲಿಷ್ಠ ತಂಡ ಕಟ್ಟುವ ತಯಾರಿಯಲ್ಲಿದೆ.ಈ ವಾರ ಕ್ಯಾನ್‌ಬೆರಾದಲ್ಲಿ ಕೊನೆಗೊಂಡ ಶ್ರೀಲಂಕಾ ವಿರುದ್ಧದ ಕೊನೆಯ ಟೆಸ್ಟ್‌ನಲ್ಲಿ 10 ವಿಕೆಟ್ ಪಡೆದು ಪಂದ್ಯ ಪುರುಷೋತ್ತಮ ಗೌರವ ಪಡೆದ ಸ್ಟಾರ್ಕ್, ಸರಣಿಯನ್ನು ತಪ್ಪಿಸಿಕೊಳ್ಳಲಿದ್ದಾರೆ. ಆಸ್ಟ್ರೇಲಿಯ-ಭಾರತ ಸರಣಿಯ ವೇಳೆ ಬೆನ್ನುನೋವಿಗೆ ಒಳಗಾಗಿರುವ ಮತ್ತೋರ್ವ ವೇಗಿ ಹೆಝಲ್‌ವುಡ್ ಕೂಡ ಭಾರತ ಪ್ರವಾಸಕ್ಕೆ ಲಭ್ಯವಿಲ್ಲ. ಆ್ಯರೊನ್ ಫಿಂಚ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದು, ಅಲೆಕ್ಸ್ ಕಾರೆ ಜೊತೆಗೆ ಪ್ಯಾಟ್ ಕಮಿನ್ಸ್‌ಗೂ -ಉಪನಾಯಕ ಪಟ್ಟ ನೀಡಲಾಗಿದೆ.
ಆಸ್ಟ್ರೇಲಿಯ ತಂಡ
►ಆ್ಯರೋನ್ ಫಿಂಚ್(ನಾಯಕ), ಉಸ್ಮಾನ್ ಖ್ವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್‌ಕಾಂಬ್, ಗ್ಲೆನ್ ಮ್ಯಾಕ್ಸ್‌ವೆಲ್, ಆ್ಯಸ್ಟನ್ ಟರ್ನರ್, ಮಾರ್ಕಸ್ ಸ್ಟೋನಿಸ್, ಅಲೆಕ್ಸ್ ಕ್ಯಾರೆ, ಪ್ಯಾಟ್ ಕಮಿನ್ಸ್, ನಥಾನ್ ಕೌಲ್ಟರ್-ನೈಲ್, ಜೆ ರಿಚರ್ಡ್ಸನ್, ಕೇನ್ ರಿಚರ್ಡ್ಸ್ಸನ್, ಜೇಸನ್ ಬೆಹ್ರೆನ್‌ಡಾರ್ಫ್, ನಥಾನ್ ಲಿಯೊನ್, ಆ್ಯಡಮ್ ಝಾಂಪ, ಡಿ ಆರ್ಕಿ ಶಾರ್ಟ್.