ಆಂಧ್ರಕ್ಕೆ ನೀಡಬೇಕಿದ್ದ ಹಣವನ್ನು ಅಂಬಾನಿಗೆ ನೀಡಿದ ಮೋದಿ: ರಾಹುಲ್ ವಾಗ್ದಾಳಿ

Update: 2019-02-11 17:53 GMT

ಹೊಸದಿಲ್ಲಿ, ಫೆ.11: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದೀಗ ಮೋದಿ ವಿರುದ್ಧ ಮತ್ತೊಂದು ವಿಷಯದಲ್ಲಿ ವಾಗ್ದಾಳಿ ಆರಂಭಿಸಿದ್ದಾರೆ. ಕೇಂದ್ರ ಸರಕಾರದ ವಿರುದ್ಧ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರಂಭಿಸಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದ ರಾಹುಲ್, ಮೋದಿ ಆಂಧ್ರಕ್ಕೆ ನೀಡಬೇಕಿದ್ದ ಹಣವನ್ನು ಅನಿಲ್ ಅಂಬಾನಿಗೆ ನೀಡಿದ್ದಾರೆ ಎಂದು ಆರೋಪಿಸಿದರು.

ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಕೇಂದ್ರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ನಾಯ್ಡು ಸೋಮವಾರ ಆಂಧ್ರಭವನದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದು, ನಾಯ್ಡು ಹೋರಾಟಕ್ಕೆ ಬೆಂಬಲ ಸೂಚಿಸಲು ರಾಹುಲ್ ಸಹಿತ ಹಲವು ವಿಪಕ್ಷ ನಾಯಕರು ಆಂಧ್ರಭವನಕ್ಕೆ ಭೇಟಿ ನೀಡಿದರು. ಆಂಧ್ರಪ್ರದೇಶ ಭಾರತದ ಭಾಗವಲ್ಲವೇ ಎಂದು ಪ್ರಶ್ನಿಸಿದ ರಾಹುಲ್, ಆಂಧ್ರದ ಜನತೆಯ ಬೆಂಬಲಕ್ಕೆ ನಿಲ್ಲುವುದಾಗಿ ತಿಳಿಸಿದರು. ಆಂಧ್ರಪ್ರದೇಶದ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸದ ಪ್ರಧಾನಿ ಮೋದಿ ಹೋದಲ್ಲೆಲ್ಲಾ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು. 2014ರಲ್ಲಿ ಆಂಧ್ರದಿಂದ ತೆಲಂಗಾಣವನ್ನು ಪ್ರತ್ಯೇಕಿಸಿದಾಗ ಆಂದ್ರಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಕೇಂದ್ರ ಸರಕಾರ ಆಶ್ವಾಸನೆ ನೀಡಿತ್ತು. ಈ ಆಶ್ವಾಸನೆಯನ್ನು ಈಡೇರಿಸಬೇಕೆಂದು ಒತ್ತಾಯಿಸುತ್ತಾ ಬಂದಿದ್ದ ಚಂದ್ರಬಾಬು ನಾಯ್ಡು ಕಳೆದ ವರ್ಷ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News