ಪ್ರಿಯಾಂಕಾ ಗಾಂಧಿಯನ್ನು ದುರ್ಗಾಮಾತೆಗೆ ಹೋಲಿಸಿದ ಕಾಂಗ್ರೆಸ್ ಕಾರ್ಯಕರ್ತರು

Update: 2019-02-11 17:58 GMT

ಲಕ್ನೊ, ಫೆ.11: ಪೂರ್ವ ಉತ್ತರಪ್ರದೇಶದ ಉಸ್ತುವಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಉತ್ತರಪ್ರದೇಶಕ್ಕೆ ಮೊದಲ ಭೇಟಿ ನೀಡುತ್ತಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಸ್ವಾಗತಿಸಲು ಲಕ್ನೋ ನಗರದ ಹಲವೆಡೆ ಹಾಕಲಾಗಿರುವ ಪೋಸ್ಟರ್‌ಗಳಲ್ಲಿ ಅವರನ್ನು ದುರ್ಗಾಮಾತೆಯಂತೆ ಬಿಂಬಿಸಲಾಗಿದೆ.

   ದುರ್ಗಾದೇವಿಯ ಅವತಾರವಾಗಿರುವ ಸೋದರಿ ಪ್ರಿಯಾಂಕ ಸುಳ್ಳುಹೇಳುವ ಕೇಡಿಗಳ ಆಡಳಿತವನ್ನು ಭಸ್ಮಗೊಳಿಸುತ್ತಾರೆ ಎಂದು ಪೋಸ್ಟರ್‌ಗಳ ಕೆಳಗಡೆ ಬರೆಯಲಾಗಿದೆ. ಯುವ ಕಾಂಗ್ರೆಸ್ ಮುಖಂಡನೋರ್ವ ಈ ಪೋಸ್ಟರ್‌ಗಳನ್ನು ನಗರದಲ್ಲಿ ಹಾಕಿದ್ದಾರೆ ಎನ್ನಲಾಗಿದೆ. ಸುಮಾರು 40 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಪೂರ್ವ ಉತ್ತರಪ್ರದೇಶದ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಕಗೊಂಡಿರುವ ಪ್ರಿಯಾಂಕ ಗಾಂಧಿ ಉತ್ತರಪ್ರದೇಶಕ್ಕೆ ನಾಲ್ಕು ದಿನಗಳ ಭೇಟಿ ನೀಡಿ ಹಲವು ಸಭಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಸುಮಾರು 30 ಕಿ.ಮೀ.ಗೂ ದೀರ್ಘವಾದ ಬೃಹತ್ ರೋಡ್‌ಶೋದಲ್ಲಿ ಅವರು ಪಾಲ್ಗೊಂಡು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News