ನಾಗರಿಕತ್ವ ಮಸೂದೆ: ಪೊಲೀಸರೊಂದಿಗಿನ ಘರ್ಷಣೆಯಲ್ಲಿ 6 ಮಹಿಳೆಯರಿಗೆ ಗಾಯ

Update: 2019-02-11 18:17 GMT

ಇಂಫಾಲ, ಫೆ. 11: ನಾಗರಿಕತ್ವ ಮಸೂದೆಯನ್ನು ಕೂಡಲೇ ಹಿಂದೆ ತೆಗೆಯುವಂತೆ ಆಗ್ರಹಿಸಿ ನಗರದಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಇಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿ ಅಶ್ರುವಾಯು ಸೆಲ್ ಹಾಗೂ ಹೊಗೆ ಬಾಂಬ್‌ಗಳನ್ನು ಸಿಡಿಸಿದ ಪರಿಣಾಮ 6 ಮಹಿಳೆಯರು ಗಾಯಗೊಂಡಿದ್ದಾರೆ.

ವಿವಾದತ್ಮಕ ಮಸೂದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ವಿಧಿಸಿದ ಹೊರತಾಗಿಯೂ ಖ್ವೆರಂಬಾಂಡ್ ಮಾರುಕಟ್ಟೆಯ ಮಹಿಳಾ ವ್ಯಾಪಾರಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪೋಸ್ಟರ್, ಬ್ಯಾನರ್‌ಗಳನ್ನು ಅಳವಡಿಸಿ ಹಾಗೂ ಟೆಂಟ್‌ಗಳನ್ನು ಹಾಕಿ ರಸ್ತೆ ತಡೆ ನಡೆಸಿದರು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸೆಲ್ ಹಾಗೂ ಹೊಗೆ ಬಾಂಬ್‌ಗಳನ್ನು ಬಳಸಿದರು ಎಂದು ಖ್ವೆರಂಬಾಂಡ್‌ನಲ್ಲಿರುವ ಮಹಿಳಾ ಸಂಘಟನೆಯ ಅಧ್ಯಕ್ಷೆ ಶಾಂತಿ ದೇವಿ ತಿಳಿಸಿದ್ದಾರೆ. ಮಸೂದೆಯನ್ನು ನಿಶ್ಯರ್ತವಾಗಿ ಹಿಂದೆ ತೆಗೆದುಕೊಳ್ಳಬೇಕು ಎಂದು ಕೋರುವ ಬ್ಯಾನರ್ ಹರಿಯಲು ಹಾಗೂ ಟೆಂಟ್‌ಗಳನ್ನು ನಾಶಪಡಿಸಲು ಪೊಲೀಕರು ಯತ್ನಿಸಿದರು ಎಂದು ಅವರು ಆರೋಪಿಸಿದ್ದಾರೆ.

ಆದರೆ, ಮಹಿಳೆಯರು ತಲೆ ಬಾಗಲಿಲ್ಲ. ಇದರಿಂದ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ಘರ್ಷಣೆ ನಡೆಯಿತು ಎಂದು ಅವರು ತಿಳಿಸಿದ್ದಾರೆ. ‘‘ಪೊಲೀಸರು ಅಶ್ರುವಾಯು ಸೆಲ್ ಹಾಗೂ ಹೊಗೆ ಬಾಂಬ್‌ಗಳನ್ನು ಸಿಡಿಸಿದರು. ಇದರಿಂದ 6 ಮಹಿಳೆಯರು ಗಾಯಗೊಂಡರು. ಗಾಯಗೊಂಡ ಓರ್ವ ಮಹಿಳೆಯನ್ನು ವಶಕ್ಕೆ ತೆಗೆದುಕೊಂಡಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.’’ ಎಂದು ಶಾಂತಿದೇವಿ ವಿವರಿಸಿದ್ದಾರೆ. ಗಾಯಗೊಂಡ ಮಹಿಳೆಯರನ್ನು ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್‌ಗೆ ಕರೆದೊಯ್ಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News