ಭಾರತದಲ್ಲಿ ‘ಸತ್ಯ ಶೋಧನಾ ಜಾಲ’ ವಿಸ್ತರಿಸಿದ ಫೇಸ್‌ಬುಕ್

Update: 2019-02-11 18:19 GMT

ಮುಂಬೈ, ಫೆ. 11: ಮೇಯಲ್ಲಿ ನಡೆಯಲಿರುವ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ತಪ್ಪು ಮಾಹಿತಿ ಹರಡುತ್ತಿರುವುದನ್ನು ತಡೆಯಲು ಫೇಸ್‌ ಬುಕ್ ಇಂಕ್ ತನ್ನ ಸತ್ಯ ಶೋಧನಾ ಜಾಲವನ್ನು ವಿಸ್ತರಿಸಲಿದೆ ಎಂದು ಅಮೆರಿಕ ಮೂಲದ ಸಾಮಾಜಿಕ ಮಾದ್ಯಮ ಸಂಸ್ಥೆ ಸೋಮವಾರ ಹೇಳಿದೆ.

‘‘ಫೇಸ್‌ಬುಕ್‌ನಲ್ಲಿ ಹುಸಿ ಸುದ್ದಿಗಳು ಹರಡುವುದರ ವಿರುದ್ಧ ಹೋರಾಡಲು ನಾವು ಬದ್ಧರಾಗಿದ್ದೇವೆ. ಮುಖ್ಯವಾಗಿ 2019ರ ಸಾರ್ವತ್ರಿಕ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ’’ ಎಂದು ಫೇಸ್‌ಬುಕ್ ಇಂಡಿಯಾದ ಸುದ್ದಿಗಳ ಪಾಲುದಾರ ಮುಖ್ಯಸ್ಥ ಮನೀಶ್ ಖಂದೂರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತು ಪ್ರತಿಪಕ್ಷವಾದ ಕಾಂಗ್ರೆಸ್ ಹಾಗೂ ಅದರ ಪ್ರಾದೇಶಿಕ ಪಕ್ಷಗಳ ನಡುವೆ ತೀವ್ರ ಹಣಾಹಣಿ ನಡೆಯಿಲಿದೆ ಎಂದು ನಿರೀಕ್ಷಿಸಲಾಗಿದೆ.

ಭಾರತದಲ್ಲಿ ರಾಜಕೀಯ ಜಾಹೀರಾತುಗಳಿಗೆ ಕಠಿಣ ನಿಯಮಗಳನ್ನು ಪರಿಚಯಿಸಲಾಗಿದೆ ಎಂದು ಫೇಸ್‌ ಬುಕ್ ಕಳೆದ ವಾರ ಹೇಳಿತ್ತು. ಸತ್ಯ ಶೋಧನಾ ಕಾರ್ಯಕ್ರಮವನ್ನು ಸಶಕ್ತಗೊಳಿಸುತ್ತಿರುವ ಇತ್ತೀಚಿನ ನಡೆ ಸುದ್ದಿಗಳ ನಿಖರತೆ ಹಾಗೂ ಸುಳ್ಳು ಸುದ್ದಿ ಹರಡುವುದನ್ನು ಪರಿಶೀಲನೆ ನಡೆಸುವ ಉದ್ದೇಶ ಹೊಂದಿದೆ. ಭಾರತದ ಮುಂಚೂಣಿಯ ಸ್ಥಳೀಯ ಮಾಧ್ಯಮ ಸಂಸ್ಥೆಯಾದ ಇಂಡಿಯಾ ಟುಡೆ ಗುಂಪು ಸಹಿತ 5 ನೂತನ ಪಾಲುದಾರರನು ಫೇಸ್‌ಬುಕ್‌ನ ಸತ್ಯಶೋಧನಾ ಜಾಲಕ್ಕೆ ಸೇರಿಸಲಾಗಿದೆ.

ಇದರೊಂದಿಗೆ ಒಟ್ಟು ಪಾಲುದಾರರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ ಎಂದು ಫೇಸ್‌ಬುಕ್‌ನ ಹೇಳಿಕೆ ತಿಳಿಸಿದೆ. ಭಾರತದಲ್ಲಿ ದೊಡ್ಡ ಸಂಖ್ಯೆಯಲ್ಲಿ ಫೇಸ್‌ಬುಕ್ ಬಳಕೆದಾರರಿದ್ದಾರೆ. ಫೇಸ್‌ಬುಕ್‌ನ ಸಂದೇಶ ರವಾನೆ ಆ್ಯಪ್ ವ್ಯಾಟ್ಸ್‌ಆ್ಯಪ್‌ನಲ್ಲಿ ದೇಶದಲ್ಲಿ 200 ದಶಲಕ್ಷ ಬಳಕೆದಾರರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News