ಬಾಂಗ್ಲಾ ವಿರುದ್ಧ ಕಿವೀಸ್‌ಗೆ ಸುಲಭ ಜಯ

Update: 2019-02-13 17:56 GMT

ನೇಪಿಯರ್, ಫೆ.13: ಬಾಂಗ್ಲಾದೇಶ ವಿರುದ್ಧ ಬುಧವಾರ ನಡೆದ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಔಟಾಗದೆ ಶತಕ ಸಿಡಿಸಿದ ಮಾರ್ಟಿನ್ ಗಪ್ಟಿಲ್ ಫಾರ್ಮ್ ಗೆ ಮರಳಿದ್ದಾರೆ. ಗಪ್ಟಿಲ್ ಶತಕದ ಸಾಹಸದಿಂದ ನ್ಯೂಝಿಲೆಂಡ್ ತಂಡ ಮೊದಲ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ತಂಡ ನ್ಯೂಝಿಲೆಂಡ್‌ಗೆ ಗೆಲ್ಲಲು 233 ರನ್ ಗುರಿ ನೀಡಿತ್ತು. ಆರಂಭಿಕ ಕುಸಿತಕ್ಕೊಳಗಾದ ಹೊರತಾಗಿಯೂ ಕಿವೀಸ್ 44.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತು.

ಬಾಂಗ್ಲಾ ಇದೀಗ 5ನೇ ಬಾರಿ ನ್ಯೂಝಿಲೆಂಡ್ ಪ್ರವಾಸ ಕೈಗೊಂಡಿದ್ದು ಈತನಕ ಯಾವುದೇ ಮಾದರಿಯ ಕ್ರಿಕೆಟ್‌ನಲ್ಲಿ ಪಂದ್ಯ ಜಯಿಸಿಲ್ಲ. ಉಭಯ ತಂಡಗಳು ಶನಿವಾರ ಕ್ರೈಸ್ಟ್ ಚರ್ಚ್‌ನಲ್ಲಿ ಎರಡನೇ ಪಂದ್ಯವನ್ನು ಆಡಲಿವೆ.

ಭಾರತ ವಿರುದ್ಧ ಸರಣಿಯ ವೇಳೆ ಗಾಯಗೊಂಡಿದ್ದ ಗಪ್ಟಿಲ್ ಇದೀಗ ಗುಣಮುಖರಾಗಿ ತಂಡಕ್ಕೆ ವಾಪಸಾಗಿದ್ದು ಔಟಾಗದೆ 117 ರನ್ ಗಳಿಸಿದರು. 103 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಾಯದಿಂದ ಗಪ್ಟಿಲ್ 15ನೇ ಶತಕ ಪೂರೈಸಿದರು. ಗಪ್ಟಿಲ್‌ಗೆ ಸಾಥ್ ನೀಡಿದ ಹೆನ್ರಿ ನಿಕೊಲ್ಸ್ 53 ರನ್ ಗಳಿಸಿದರು. ಹಿರಿಯ ದಾಂಡಿಗ ರಾಸ್ ಟೇಲರ್ ಔಟಾಗದೆ 45 ರನ್ ಕೊಡುಗೆ ನೀಡಿದರು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದ ಪರ ಮುಹಮ್ಮದ್ ಮಿಥುನ್ 62 ರನ್ ಗಳಿಸಿದರು. 41 ರನ್ ಗಳಿಸಿದ ಮುಹಮ್ಮದ್ ಸೈಫುದ್ದೀನ್ ಅವರು ಮಿಥುನ್‌ಗೆ ಸಾಥ್ ನೀಡಿದರು. ಬಾಂಗ್ಲಾದೇಶ 48.5 ಓವರ್‌ಗಳಲ್ಲಿ 232 ರನ್‌ಗೆ ಆಲೌಟಾಯಿತು. ಕಿವೀಸ್ ಪರ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಹಾಗೂ ವೇಗಿ ಟ್ರೆಂಟ್ ಬೌಲ್ಟ್ ತಲಾ 3 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News