ಕತ್ತಿವರಸೆ, ಖೋ-ಖೋ ಕ್ರೀಡೆ ಆದ್ಯತೆ ವಿಭಾಗಕ್ಕೆ ಭಡ್ತಿ ನೀಡಲು ಕ್ರೀಡಾ ಇಲಾಖೆ ನಕಾರ

Update: 2019-02-14 18:10 GMT

ಹೊಸದಿಲ್ಲಿ, ಫೆ.14: ಈಗ ‘ಇತರ’ ವಿಭಾಗದಲ್ಲಿರುವ ಕತ್ತಿವರಸೆ, ಖೋ-ಖೋ ಹಾಗೂ ಸಾಫ್ಟ್ ಟೆನಿಸ್ ಕ್ರೀಡೆಯನ್ನು ‘ಆದ್ಯತೆ’ ವಿಭಾಗಕ್ಕೆ ಭಡ್ತಿಗೊಳಿಸಬೇಕು ಎಂಬ ಕೋರಿಕೆಯನ್ನು ಕ್ರೀಡಾ ಇಲಾಖೆ ತಿರಸ್ಕರಿಸಿದ್ದು ಈ ಮೂರೂ ಕ್ರೀಡಾ ವಿಭಾಗಗಳು ಭಡ್ತಿಗೆ ಅರ್ಹವಾಗಿಲ್ಲ ಎಂದು ತಿಳಿಸಿದೆ. 

ಆದ್ಯತೆ ವಿಭಾಗದ ಕ್ರೀಡೆ ಸರಕಾರದಿಂದ ಆರ್ಥಿಕ ನೆರವು ಹಾಗೂ ಈ ವಿಭಾಗದ ಕ್ರೀಡಾಳುಗಳಿಗೆ ವಿದೇಶದ ಕ್ರೀಡಾಳುಗಳೊಂದಿಗೆ ಸ್ಪರ್ಧಿಸುವ ಅವಕಾಶವಿರುತ್ತದೆ. ಇತರ ವಿಭಾಗದ ಕ್ರೀಡೆಗಳು ರಾಷ್ಟ್ರೀಯ ಚಾಂಪಿಯನ್‌ಶಿಪ್ ಟೂರ್ನಿ ನಡೆಸಲು ಮಾತ್ರ ಸರಕಾರದಿಂದ ಅನುದಾನ ಪಡೆಯುತ್ತವೆ.

ಏಶ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ವೈಯಕ್ತಿಕ/ತಂಡ ವಿಭಾಗದ ಸ್ಪರ್ಧೆಯಲ್ಲಿ 6 ಅಥವಾ 8ನೇ ಸ್ಥಾನದಲ್ಲಿರುವ ಮತ್ತು ಜನಪ್ರಿಯ ಕ್ರೀಡೆಯನ್ನು ಆದ್ಯತೆ ವಿಭಾಗದಲ್ಲಿ ಗುರುತಿಸಲಾಗುತ್ತದೆ. ಸಾಫ್ಟ್ ಟೆನಿಸ್ ಸ್ಪರ್ಧೆಯು ಜಕಾರ್ತದಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ 10ನೇ ಸ್ಥಾನ ಪಡೆಯಲಷ್ಟೇ ಶಕ್ತವಾಗಿದ್ದು ಅರ್ಹತಾ ಮಾನದಂಡ ಪಡೆಯಲು ವಿಫಲವಾಗಿದೆ. ಇದೇ ರೀತಿ, 11 ಸ್ಪರ್ಧೆಯಲ್ಲಿ ಕತ್ತಿವರಸೆ(ಮಹಿಳೆಯರು) ಸ್ಪರ್ಧೆಯು 6ನೇ ಸ್ಥಾನ ಗಳಿಸಿದೆ. ಆದ್ದರಿಂದ ಈ ಕ್ರೀಡೆಗಳಿಗೆ ಅಂತರ್‌ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಅವಕಾಶ ಒದಗಿಸಿ ಅಂಕವನ್ನು ಹೆಚ್ಚಿಸಿಕೊಳ್ಳಲು ಮತ್ತು ತಮ್ಮ ಶ್ರೇಯಾಂಕ ಸುಧಾರಿಸಿಕೊಳ್ಳಲು ನೆರವಾಗಲು ಕ್ರೀಡಾ ಇಲಾಖೆ ನಿರ್ಧರಿಸಿದೆ. ಭಾರತದಲ್ಲಿ ಕ್ರೀಡಾ ವಿಷಯಗಳನ್ನು - ಉನ್ನತ ಆದ್ಯತೆ, ಆದ್ಯತೆ, ಇತರ ಮತ್ತು ಸಾಮಾನ್ಯ ಎಂಬ ನಾಲ್ಕು ವಿಭಾಗಗಳಲ್ಲಿ ಸೇರಿಸಲಾಗುತ್ತದೆ.

ಸಾಫ್ಟ್ ಟೆನಿಸ್ ಸಂಸ್ಥೆಯ ಅಧ್ಯಕ್ಷರಾಗಿ ಬಿಜೆಪಿಯ ರಾಜ್ಯಸಭಾ ಸಂಸದ ಶಂಭುಪ್ರಸಾದ್ , ಖೋ-ಖೋ ಸಂಸ್ಥೆಯ ಅಧ್ಯಕ್ಷರಾಗಿ ಬಿಜೆಪಿಯ ಮುಖಂಡ ಸುಧಾಂಶು ಮಿತ್ತಲ್, ಕತ್ತಿವರಸೆ ಸಂಸ್ಥೆಯ ಅಧ್ಯಕ್ಷರಾಗಿ ಭಾರತೀಯ ಒಲಿಂಪಿಕ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಮಧ್ಯೆ, ಏಶಿಯನ್ ಖೊಖೊ ಫೆಡರೇಶನ್‌ನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿರುವ ರಾಜೀವ್ ಮೆಹ್ತಾ, ತನ್ನ ಪ್ರಭಾವ ಬಳಸಿ ಖೋ ಖೋ ಕ್ರೀಡೆಯನ್ನು ‘ಸಾಮಾನ್ಯ’ ವಿಭಾಗಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದು 2022ರ ಏಶ್ಯಾಡ್‌ನಲ್ಲಿ ಖೋ ಖೋ ಸ್ಪರ್ಧೆ ಸ್ಥಾನ ಪಡೆಯುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News