ದ್ವಿತೀಯ ಪಿಯು ಮಂಡಳಿ ಪರೀಕ್ಷೆಬರೆಯುವ ಜೊತೆಗೆ ತರಬೇತಿ ನಡೆಸುತ್ತಿರುವ ಓಟಗಾರ್ತಿ ಹಿಮಾ ದಾಸ್

Update: 2019-02-14 18:12 GMT

ಗುವಾಹಟಿ, ಫೆ.14: ಓಟದ ಟ್ರಾಕ್‌ನಲ್ಲಿ ದಾಖಲೆ ಮೇಲೆ ದಾಖಲೆ ನಿರ್ಮಿಸಿರುವ ಭಾರತದ ಉದಯೋನ್ಮುಖ ಓಟಗಾರ್ತಿ ಹಿಮಾ ದಾಸ್ ತನ್ನ ಶಿಕ್ಷಣವನ್ನು ಮೊಟಕುಗೊಳಿಸಲು ಬಯಸದೇ, ಏಕಕಾಲದಲ್ಲಿ ತರಬೇತಿಯ ಜೊತೆಗೆ ದ್ವಿತೀಯ ಪಿಯು ಬೋರ್ಡ್ ಪರೀಕ್ಷೆಯನ್ನು ಬರೆಯುತ್ತಿದ್ದಾರೆ.

400 ಮೀ. ಓಟದಲ್ಲಿ ವಿಶ್ವ ಜೂನಿಯರ್ ಚಾಂಪಿಯನ್ ಆಗಿರುವ ಅಸ್ಸಾಂನ ನಾಗಾಂವ್ ಜಿಲ್ಲೆಯ ಗ್ರಾಮೀಣ ಪ್ರತಿಭೆ ಹಿಮಾ ರಾತ್ರೋರಾತ್ರಿ ರಾಣಿಯಾಗಿ ಹೊರಹೊಮ್ಮಿದ್ದರು. ಕಳೆದ ವರ್ಷ ತನ್ನ ಓಟದ ಸಮಯವನ್ನು ಉತ್ತಮಪಡಿಸಿಕೊಂಡಿದ್ದು, ಏಶ್ಯನ್ ಗೇಮ್ ್ಸ ನಲ್ಲಿ 50.79 ಸೆಕೆಂಡ್‌ನಲ್ಲಿ ಗುರಿ ತಲುಪಿ ಬೆಳ್ಳಿ ಜಯಿಸಿದ್ದರು. ಮಾತ್ರವಲ್ಲ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು.

ಇತರ ಯುವತಿಯರಂತೆ ಹಿಮಾ ಕೂಡ ಶಿಕ್ಷಣದಲ್ಲಿ ಪದವಿ ಪಡೆಯಲು ಬಯಸಿದ್ದಾರೆ. ಪ್ರಸ್ತುತ ಅವರು ಅಸ್ಸಾಂ ಉನ್ನತ ಮಾಧ್ಯಮಿಕ ಶಿಕ್ಷಣ ಪರಿಷತ್‌ನ ದ್ವಿತೀಯ ಪಿಯು ಪರೀಕ್ಷೆೆಗೆ ಹಾಜರಾಗುತ್ತಿದ್ದಾರೆ. ‘‘ನಾನು 2019ರಲ್ಲಿ ಪ್ರಮುಖ ಟೂರ್ನಮೆಂಟ್‌ಗಳನ್ನು ಎದುರು ನೋಡುತ್ತಿರುವೆ. ಕಾಲೇಜು ಪರೀಕ್ಷೆಯ ಜೊತೆಗೆ ನನ್ನ ತರಬೇತಿ ಕಡೆಗೂ ಗಮನ ನೀಡುತ್ತಿದ್ದೇನೆ. ಶಿಕ್ಷಣ ಪಡೆಯುವಾಗ ಲಭಿಸುವ ಸಮಯದಲ್ಲೇ ತರಬೇತಿ ಪಡೆಯುತ್ತಿದ್ದೇನೆ’’ ಎಂದು ಹಿಮಾ ದಾಸ್ ಪಿಟಿಐಗೆ ತಿಳಿಸಿದ್ದಾರೆ.

ಹಿಮಾ ಅವರ ಮಂಡಳಿ ಪರೀಕ್ಷೆಯು ಫೆ.12 ರಂದು ಆರಂಭವಾಗಿದೆ. ಮಾರ್ಚ್ ಮಧ್ಯದ ತನಕ ಪರೀಕ್ಷೆ ನಡೆಯಲಿದೆ. ‘‘ಫೆ.11 ರಂದು ಸಂಜೆ ಗುವಾಹಟಿಗೆ ಬಂದಿರುವ ಹಿಮಾ ಮರುದಿನ ಬೆಳಗ್ಗೆ ಮೊದಲ ಪರೀಕ್ಷೆ ಬರೆದಿದ್ದಾರೆ. ಮಧ್ಯಾಹ್ನ ಪರೀಕ್ಷೆ ಮುಗಿದ ಬಳಿಕ ಮನೆಗೆ ತೆರಳಿದ್ದಾರೆ. ಎರಡನೇ ಪರೀಕ್ಷೆಗೆ ಹಾಜರಾಗಲು ಶುಕ್ರವಾರ ಬರುವುದಾಗಿ ಹೇಳಿದ್ದಾರೆ. ಪರೀಕ್ಷೆ ಬರೆದು ಮತ್ತೆ ತರಬೇತಿ ನಡೆಸಲು ಗುವಾಹಟಿಗೆ ವಾಪಸಾಗಲಿದ್ದಾರೆ. ಇದಕ್ಕೆ ಅವರ ಹೆತ್ತವರ ಬೆಂಬಲವಿದೆ. ತನ್ನ ಮಗಳು ಶೈಕಣಿಕ ಅರ್ಹತೆ ಪಡೆಯಬೇಕೆನ್ನುವುದು ಹೆತ್ತವರ ಬಯಕೆಯಾಗಿದೆ’’ ಎಂದು ಹಿಮಾ ಸಂಬಂಧಿ ಬಿಜಾಯ್ ದಾಸ್ ಹೇಳಿದ್ದಾರೆ. ಹಿಮಾ ತಂದೆ ರೈತ. ತಾಯಿ ಗೃಹಿಣಿ. ಸಣ್ಣ ತುಂಡು ಭೂಮಿಯೇ ಆರು ಜನರಿರುವ ಕುಟುಂಬದ ಆದಾಯ ಮೂಲ. ನಾಲ್ವರು ಒಡಹುಟ್ಟಿದವರ ಪೈಕಿ ಹಿಮಾ ಹಿರಿಯವಳು. ಹಿಮಾಗೆ ಇಬ್ಬರು ತಂಗಿಯರು ಹಾಗೂ ಓರ್ವ ತಮ್ಮನಿದ್ದಾನೆ.

ಹಿಮಾ ಮುಂದಿನ ತಿಂಗಳು ಫೆಡರೇಶನ್ ಕಪ್ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಮೂಲಕ ತನ್ನ ಅಥ್ಲೆಟಿಕ್ ಋತು ಆರಂಭಿಸಲಿದ್ದಾರೆ.

ಕ್ರೀಡಾಪಟುವಾಗಿ ಅಸ್ಸಾಂನಲ್ಲಿ ಜನಜನಿತವಾಗಿರುವ ಹಿಮಾ ಕಳೆದ ವರ್ಷ ರಾಜ್ಯ ಕ್ರೀಡಾ ರಾಯಭಾರಿಯಾಗಿ ನೇಮಕಗೊಂಡಿದ್ದರು. ಹಲವು ಗೌರವವನ್ನು ಪಡೆದಿದ್ದಾರೆ. ಕಳೆದ ವರ್ಷ ಕೇಂದ್ರ ಸರಕಾರ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News