ಬೌಲರ್‌ಗಳ ರಕ್ಷಣೆಗೆ ಮುಖ ಕವಚದ ಬೇಡಿಕೆ ಇಟ್ಟ ಅಶ್ವಿನ್, ಜೆದೇವ್ ಉನಾದ್ಕತ್

Update: 2019-02-14 18:14 GMT

ಹೊಸದಿಲ್ಲಿ, ಫೆ.14: ಬೌನ್ಸರ್‌ಗಳ ಭಯ ಹಾಗೂ ತಲೆಗೆ ಗಾಯವಾಗುವುದನ್ನು ತಡೆಗಟ್ಟಲು ಬ್ಯಾಟ್ಸ್‌ಮನ್ ಹೆಲ್ಮೆಟ್ ಧರಿಸುತ್ತಾನೆ. ಬ್ಯಾಟ್ಸ್‌ಮನ್ ಸಮೀಪ ಫೀಲ್ಡಿಂಗ್ ಮಾಡುವ ಫೀಲ್ಡರ್ ಕೂಡ ಹೆಲ್ಮೆಟ್ ಹಾಕಿಕೊಳ್ಳುತ್ತಾನೆ. ವಿಕೆಟ್‌ಕೀಪರ್‌ಗಳು ಸಂಭಾವ್ಯ ಅವಘಡದಿಂದ ಪಾರಾಗಲು ಹೆಲ್ಮೆಟ್ ಧರಿಸುವುದನ್ನು ನಾವು ಕಾಣುತ್ತಿದ್ದೇವೆ. ಬ್ಯಾಟ್ಸ್ ಮನ್‌ಗಳ ಎದುರು ನಿಂತುಕೊಳ್ಳುವ ಅಂಪೈರ್‌ಗಳು ಚೆಂಡಿನ ಹೊಡೆತದಿಂದ ಪಾರಾಗಲು ತಮ್ಮ ರಕ್ಷಣೆಗೆ ಹೆಲ್ಮೆಟ್ ಧರಿಸುವುದನ್ನು ಕಾಣಬಹುದು. ಆದರೆ ಓರ್ವ ಆಟಗಾರ ಮಾತ್ರ ಯಾವುದೇ ರಕ್ಷಣೆಯಿಲ್ಲದೆ ಆಡುತ್ತಾನೆ. ಅವನೇ ಬೌಲರ್.

ಇತ್ತೀಚೆಗೆ ಕೋಲ್ಕತಾದಲ್ಲಿ ಅಶೋಕ್ ದಿಂಡಾ ಬಂಗಾಳ ಪರ ಅಭ್ಯಾಸ ಪಂದ್ಯವನ್ನು ಆಡುತ್ತಿದ್ದಾಗ ಬ್ಯಾಟ್ಸ್ ಮನ್ ಬೀರೇಂದ್ರ ಸಿಂಗ್ ಬಾರಿಸಿದ ಚೆಂಡನ್ನು ತಡೆಯುವ ಯತ್ನದಲ್ಲಿದ್ದಾಗ ಚೆಂಡು ಅವರ ಹಣೆಗೆ ಅಪ್ಪಳಿಸಿತ್ತು. ಇದು ಬೌಲರ್ ಎದುರಿಸುತ್ತಿರುವ ಅಪಾಯಕ್ಕೆ ಸಾಕ್ಷಿಯಾಗಿದೆ.

ಸೋಮವಾರ ಈ ಘಟನೆ ನಡೆದ ಬಳಿಕ ಎಚ್ಚೆತ್ತುಕೊಂಡಿರುವ ಭಾರತದ ಸ್ಪಿನ್ನರ್ ಆರ್.ಅಶ್ವಿನ್ ಹಾಗೂ ವೇಗದ ಬೌಲರ್ ಜೈದೇವ್ ಉನಾದ್ಕತ್ ಬೌಲರ್‌ಗಳಿಗೂ ಕೂಡ ಯಾವುದಾದರೂ ಸುರಕ್ಷಾ ತಂತ್ರವನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

‘‘ಕ್ರಿಕೆಟ್‌ನಲ್ಲಿ ಎಲ್ಲ ಬೌಲರ್‌ಗಳಿಗೆ ಮುಖ ಕವಚ ಧರಿಸಬೇಕಾದ ಸಮಯ ಬಂದಿದೆ. ಇಂತಹ ಘಟನೆಗಳು ಪದೇ ಪದೇ ಏಕಾಗುತ್ತಿದೆ. ದಿಂಡಾ ಬೇಗನೆ ಚೇತರಿಸಿಕೊಳ್ಳುವ ವಿಶ್ವಾಸ ನನಗಿದೆ. ಈ ಕುರಿತು ಅಶ್ವಿನ್ ಬಾಯ್ ಪ್ರತಿಕ್ರಿಯೆ ಏನು? ಎಂದು ಜೈದೇವ್ ಉನಾದ್ಕತ್ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಶ್ವಿನ್,‘‘2011ರಿಂದ ಈ ಬಗ್ಗೆ ಹೇಳಲಾಗುತ್ತಿದೆ. ಟಿ-20 ಕ್ರಿಕೆಟ್ ಯುಗ ಆರಂಭಕ್ಕೆ ಮೊದಲು ಇಂತಹ ಘಟನೆಗಳು ನಡೆಯುತ್ತಿರಲಿಲ್ಲ. ಏನಾದರೂ ಬದಲಾವಣೆ ಮಾಡಲೇಬೇಕಾಗಿದೆ’’ ಎಂದರು.

ಸೋಮವಾರ ಹಣೆಗೆ ಚೆಂಡಿನ ಏಟಿಗೆ ಈಡಾಗಿದ್ದ ದಿಂಡಾ ಆಸ್ಪತ್ರೆಗೆ ದಾಖಲಾದ ಬಳಿಕ ಸ್ಕಾನಿಂಗ್‌ನಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಅವರಿಗೆ ಎರಡು ದಿನ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದರು ಎಂದು ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News