ಇಂಡಿಯನ್ ವೆಲ್ಸ್ ನಿಂದ ಶರಪೋವಾ ಔಟ್

Update: 2019-02-15 16:11 GMT

ಕ್ಯಾಲಿಫೋರ್ನಿಯಾ,ಫೆ.14: ಭುಜನೋವಿನಿಂದ ಚೇತರಿಸಿಕೊಳ್ಳಲು ವಿಫಲರಾಗಿರುವ ರಶ್ಯದ ಹಿರಿಯ ಆಟಗಾರ್ತಿ ಮರಿಯಾ ಶರಪೋವಾ ಮುಂದಿನ ತಿಂಗಳು ನಡೆಯುವ ಡಬ್ಲುಟಿಎ ಇಂಡಿಯನ್ ವೆಲ್ಸ್ ಓಪನ್ ಟೆನಿಸ್ ಟೂರ್ನಿಯಿಂದ ಹೊರಗುಳಿದಿದ್ದಾರೆಂದು ಟೂರ್ನಿಯ ಸಂಘಟಕರು ತಿಳಿಸಿದ್ದಾರೆ.

31ರ ಹರೆಯದ ಶರಪೋವಾ ಬಲ ಭುಜನೋವಿನಿಂದ ಬಳಲುತ್ತಿದ್ದು, ಕಳೆದ ತಿಂಗಳು ನಡೆದ ಸೈಂಟ್ ಪೀಟರ್ಸ್‌ಬರ್ಗ್ ಟೂರ್ನಮೆಂಟ್‌ನಿಂದ ಹಿಂದೆ ಸರಿದಿದ್ದರು.

ಶರಪೋವಾ ಗಾಯದ ಸಮಸ್ಯೆಯಿಂದಾಗಿಯೇ ಮಾ.4ರಿಂದ 17ರ ತನಕ ಕ್ಯಾಲಿಫೋರ್ನಿಯಾದಲ್ಲಿ ನಡೆಯುವ ಟೂರ್ನಮೆಂಟ್‌ನಿಂದ ಹಿಂದೆ ಸರಿದಿದ್ದಾರೆ.

ಪ್ರಧಾನ ಸುತ್ತಿನಲ್ಲಿ ಸ್ಥಾನ ಪಡೆದಿರುವ ಶರಪೋವಾ ಜರ್ಮನಿಯ ಮೋನಾ ಬಾರ್ಥೆಲ್‌ರನ್ನು ಎದುರಿಸಬೇಕಾಗಿತ್ತು ಎಂದು ಆಯೋಜಕರು ತಿಳಿಸಿದ್ದಾರೆ.

2017ರಲ್ಲಿ 15 ತಿಂಗಳ ಕಾಲ ನಿಷೇಧಕ್ಕೆ ಒಳಗಾದ ಬಳಿಕ ಶರಪೋವಾ ಉನ್ನತ ಮಟ್ಟದ ಫಿಟ್ನೆಸ್ ಪಡೆಯಲು ಪರದಾಡುತ್ತಿದ್ದಾರೆ. ಮಾಜಿ ನಂ.1 ಆಟಗಾರ್ತಿ ಶರಪೋವಾ ಕಳೆದ ತಿಂಗಳು ನಡೆದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಎಡವಿದ್ದರು. ಐದು ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ಆಗಿರುವ ಅವರು ಪ್ರಶಸ್ತಿ ಸಂಖ್ಯೆ ಹೆಚ್ಚಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News