ಪೋಲಿಯೊ ಲಸಿಕೆ ಖರೀದಿಸಲು ಹಣವಿಲ್ಲ!: ಆರ್ಥಿಕ ನೆರವು ಕೋರಿದ ಭಾರತ

Update: 2019-02-15 15:28 GMT

ಹೊಸದಿಲ್ಲಿ, ಫೆ. 15: ಆರೋಗ್ಯ ಕಾರ್ಯಕ್ರಮಗಳಿಗೆ ಹಣಕಾಸು ಸಂಪನ್ಮೂಲಗಳ ಸಮಸ್ಯೆಯಾಗಿಲ್ಲ ಎಂದು ಪ್ರತಿಪಾದಿಸಿರುವ ಸರಕಾರ ಪೋಲಿಯೊ ಲಸಿಕೆ ಖರೀದಿಸಲು ಅಂತಾರಾಷ್ಟ್ರೀಯ ಸಂಘಟನೆಯಿಂದ 100 ಕೋಟಿ ರೂಪಾಯಿ ಸಾಲ ಕೇಳಿದೆ. ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿರುವ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಇದನ್ನು ಒಪ್ಪಿಕೊಂಡಿದೆ.

ಮುಂದಿನ ಮೂರು ವರ್ಷಗಳ ಕಾಲ ಆರ್ಥಿಕ ನೆರವು ನೀಡುವಂತೆ ಬಡ ರಾಷ್ಟ್ರಗಳಲ್ಲಿ ರೋಗ ನಿರೋಧಕ ಕಾರ್ಯಕ್ರಮಗಳಿಗೆ ನೆರವು ನೀಡುವ ಅಂತಾರಾಷ್ಟ್ರೀಯ ಸಂಘಟನೆ ಗ್ಲೋಬಲ್ ವ್ಯಾಕ್ಸಿನ್ಸ್ ಅಲೆಯನ್ಸ್‌ನಲ್ಲಿ ಕೇಂದ್ರ ಸರಕಾರ ವಿನಂತಿಸಿದೆ ಎಂದು ಸಚಿವಾಲಯ ತಿಳಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚುಚ್ಚಬಹುದಾದ ಪೊಲಿಯೋ ಲಸಿಕೆ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸಾಲ ಕೇಳಿದೆ ಎಂದು ಕಳದೆ ವಾರ ಸದನದಲ್ಲಿ ಮಾಹಿತಿ ನೀಡಲಾಗಿತ್ತು. ನಿಷ್ಕ್ರಿಯ ಪೋಲಿಯೊ ಲಸಿಕೆ (ಐಪಿವಿ) ಬೆಲೆ 2016ರಿಂದ ಶೇ. 80ರಷ್ಟು ಏರಿಕೆಯಾಗಿದೆ ಎಂದು ಆರೋಗ್ಯ ಖಾತೆಯ ಸಹಾಯಕ ಸಚಿವ ಅಶ್ವಿನಿ ಚೌಬೆ ಸಂಸತ್ತಿನಲ್ಲಿ ಹೇಳಿದ್ದಾರೆ.

ಕೇಂದ್ರ ಸರಕಾರ ನಿಷ್ಕ್ರಿಯ ಪೋಲಿಯೊ ಲಸಿಕೆಗಾಗಿ ಗ್ಲೋಬಲ್ ವ್ಯಾಕ್ಸಿನ್ ಅಲೆಯನ್ಸ್‌ನ ಸಹಾಯ ಕೋರಿದೆ. ಮುಂದಿನ ಮೂರು ವರ್ಷಗಳ ಕಾಲ ವಾರ್ಷಿಕ ಅಗತ್ಯತೆಯ ಶೇ. 50ರಷ್ಟು ಆರ್ಥಿಕ ನೆರವು ನೀಡಬೇಕು ಎಂದು ಕೋರಲಾಗಿದೆ ಎಂದು ಪ್ರತಿಕ್ರಿಯೆ ತಿಳಿಸಿದೆ.

1995ರಲ್ಲಿ ಆರಂಭಿಸಿದ ಬಾಯಿಯ ಮೂಲಕ ನೀಡುವ ಪೋಲಿಯೊ ಲಸಿಕೆ ಜೊತೆಯಲ್ಲಿ 2015ರಲ್ಲಿ ಭಾರತ ತನ್ನ ರೋಗ ನಿರೋಧಕ ಕಾರ್ಯಕ್ರಮದಲ್ಲಿ ನಿಷ್ಕ್ರಿಯ ಪೋಲಿಯು ಲಸಿಕೆ (ಐಪಿವಿ) ಪರಿಚಯಿಸಿತು. ಭಾರತ ಸರಕಾರ ಫ್ರಾನ್ಸ್‌ನ ಪ್ರಮುಖ ಔಷಧ ಕಂಪೆನಿಯಾದ ಸನೋಫಿಯಿಂದ ಮಾತ್ರ ಇದನ್ನು ಖರೀದಿಸುತ್ತದೆ. ಬೆಲೆ ಏರಿಕೆ ನಿಭಾಯಿಸಲು ಅಂತಾರಾಷ್ಟ್ರೀಯ ದಾನಿಯಿಂದ 100 ಕೋಟಿ ರೂಪಾಯಿ ನೆರವನ್ನು ಸರಕಾರ ಕೋರಿರುವುದು ‘ರಾಷ್ಟ್ರೀಯ ಮುಜುಗರ’ದ ವಿಚಾರ ಎಂದು ತೆಲಂಗಾಣ ರಾಷ್ಟ್ರ ಸಮಿತಿ ಸಂಸದ ವಿನೋದ್ ಕುಮಾರ್ ಬೊಯಾನಪಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News