ವಿಮಾನ ಅಪಘಾತದಲ್ಲಿ ಮೃತಪಟ್ಟ ಫುಟ್ಬಾಲ್ ತಾರೆ ಎಮಿಲಿಯಾನೊ ಅಂತ್ಯಕ್ರಿಯೆ

Update: 2019-02-16 18:14 GMT

ಪ್ರೊಗ್ರೆಸ್ಸೊ(ಅರ್ಜೆಂಟೀನ), ಫೆ.16: ಮೂರು ವಾರಗಳ ಹಿಂದೆ ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ ಕಾರ್ಡಿಫ್ ಸಿಟಿ ಫುಟ್ಬಾಲ್ ಕ್ಲಬ್‌ನ ಸ್ಟ್ರೈಕರ್ ಎಮಿಲಿಯಾನೊ ಸಲಾ ಅವರ ಅಂತ್ಯಕ್ರಿಯೆ ಶನಿವಾರ ಅರ್ಜೆಂಟೀನದ ಅವರ ಹುಟ್ಟೂರಿನ ಹಳ್ಳಿಯೊಂದರಲ್ಲಿ ನೆರವೇರಿತು.

ಸಾಂಟಾ ಫೆ ಪ್ರಾಂತ್ಯದ ಸಾಧಾರಣ ಹಳ್ಳಿಯೊಂದರಲ್ಲಿ ನಡೆದ ಸಲಾ ಅಂತ್ಯಕ್ರಿಯೆಯಲ್ಲಿ ಅವರ ತಂದೆ, ತಾಯಿ, ಸಹೋದರಿ,ಸ್ನೇಹಿತರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.

28ರ ಹರೆಯದ ಎಮಿಲಿಯಾನೊ ಕಾರ್ಡಿಫ್ ಸಿಟಿಯೊಂದಿಗೆ 19.3 ಮಿಲಿಯನ್ ಒಪ್ಪಂದಕ್ಕೆ ಸಹಿ ಹಾಕಿದ ಎರಡು ದಿನಗಳ ಬಳಿಕ ಜ.21 ರಂದು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಒಂದೇ ಇಂಜಿನ್‌ನ ಖಾಸಗಿ ವಿಮಾನದಲ್ಲಿ ಸಲಾ ಹಾಗೂ ಅವರ ಪೈಲಟ್ ಡೇವಿಡ್ ಇಬ್ಬೊಟ್ಸನ್ ಪ್ರಯಾಣಿಸುತ್ತಿದ್ದಾಗ ಸಮುದ್ರದಲ್ಲಿ ವಿಮಾನ ಪತನವಾಗಿತ್ತು. ಎಮಿಲಿಯಾನೊ ಫ್ರಾನ್ಸ್‌ಗೆ ತೆರಳಿ ತನ್ನ ಮಾಜಿ ಆಟಗಾರರನ್ನು ಮಾತನಾಡಿಸಿ ವೇಲ್ಸ್‌ಗೆ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿತ್ತು.

ಎಮಿಲಿಯಾನೊ ಮೃತದೇಹ ತೀವ್ರ ಶೋಧದ ಬಳಿಕ ಫೆ.7ರಂದು ಪತ್ತೆಯಾಗಿತ್ತು. 120 ಲೀಗ್ ಪಂದ್ಯಗಳನ್ನು ಆಡಿದ್ದ ಎಮಿಲಿಯಾನೊ 42 ಗೋಲುಗಳನ್ನು ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News