ದ್ವೇಷ ಬಿತ್ತಲು ಹುತಾತ್ಮ ಯೋಧರ ನಕಲಿ ಫೋಟೊ ಬಳಕೆ: ಸಿಆರ್‌ಪಿಎಫ್ ಎಚ್ಚರಿಕೆ

Update: 2019-02-17 15:38 GMT

ಹೊಸದಿಲ್ಲಿ, ಫೆ.17: ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 40 ಮಂದಿ ಯೋಧರ ಛಿದ್ರಗೊಂಡ ದೇಹದ ಭಾಗಗಳೆಂದು ಹೇಳಿಕೊಂಡು ಅಂತರ್ಜಾಲದಲ್ಲಿ ‘ನಕಲಿ ಚಿತ್ರಗಳನ್ನು’ ಪ್ರಸಾರ ಮಾಡಲಾಗುತ್ತಿರುವ ಬಗ್ಗೆ ಸಿಆರ್‌ಪಿಎಫ್ ರವಿವಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

‘‘ನಾವು ಒಗ್ಗಟ್ಟಿನಿಂದ ಇದ್ದಿರುವಾಗ, ಕೆಲವು ಕಿಡಿಗೇಡಿಗಳು ದ್ವೇಷವನ್ನು ಪ್ರಚೋದಿಸಲು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಹುತಾತ್ಮ ಯೋಧರ ದೇಹದ ಭಾಗಗಳೆಂದು ಹೇಳಿಕೊಂಡು ನಕಲಿ ಚಿತ್ರಗಳನ್ನು ಪ್ರಸಾರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಛಾಯಾಚಿತ್ರಗಳು ಅಥವಾ ಪೋಸ್ಟ್‌ಗಳ ಪ್ರಸಾರ/ಹಂಚಿಕೆಯನ್ನು ದಯವಿಟ್ಟು ಮಾಡಕೂಡದು’’ ಎಂದು ಸಿಆರ್‌ಪಿಎಫ್, ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪ್ರಕಟಿಸಿದೆ.

ಇಂತಹ ಯಾವುದೇ ವಿಷಯ ಅಥವಾ ಛಾಯಾಚಿತ್ರವನ್ನು ತಮಗೆ ಬಂದಲ್ಲಿ ಆ ಬಗ್ಗೆ ವೆಬ್‌ಪ್ರೊ@ ಸಿಆರ್‌ಪಿಎಫ್.ಜಿಓವಿ.ಇನ್.ಗೆ ಇಮೇಲ್‌ನಲ್ಲಿ ಮಾಹಿತಿ ನೀಡುವಂತೆ ಅದು ಜನತೆಗೆ ತಿಳಿಸಿದೆ.

ಜಮ್ಮುಕಾಶ್ಮೀರದಲ್ಲಿ 65 ಸಾವಿರ ಸಿಬ್ಬಂದಿಯನ್ನು ನಿಯೋಜಿಸಿರುವ ಅರೆಸೈನಿಕ ಪಡೆಯಾದ ಸಿಆರ್‌ಪಿಎಫ್, ರವಿವಾರ ಬಿಡುಗಡೆಗೊಳಿಸಿದ ಇನ್ನೊಂದು ಸಲಹಾ ಸೂಚನೆಯೊಂದರಲ್ಲಿ ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತಿದೆಯೆಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಸುಳ್ಳು ಸಂದೇಶಗಳ ಬಗ್ಗೆಯೂ ಎಚ್ಚರಿಕೆ ವಹಿಸುವಂತೆ ತಿಳಿಸಿದೆ.

‘‘ಕಾಶ್ಮೀರದ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತಿದೆಯೆಂಬ ಸುಳ್ಳು ಸುದ್ದಿಯನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುತ್ತಿದ್ದಾರೆ. ಸಿಆರ್‌ಪಿಎಫ್‌ನ ಸಹಾಯವಾಣಿಯು ಈ ಕೂರಿತ ದೂರುಗಳ ತನಿಖೆ ನಡೆಸಿದ್ದು, ಅವೆಲ್ಲವೂ ಸುಳ್ಳೆಂಬುದನ್ನು ಪತ್ತೆಹಚ್ಚಿದೆ’’ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News