ಪಾಕ್ ಕಲಾವಿದರನ್ನು ನಿಷೇಧಿಸಲು ಎಂಎನ್‌ಎಸ್ ಆಗ್ರಹ

Update: 2019-02-17 15:42 GMT

 ಮುಂಬೈ, ಫೆ.17: ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪಾಕ್ ಕಲಾವಿದರ ಮೇಲೆ ನಿಷೇಧ ಹೇರುವಂತೆ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಒತ್ತಾಯಿಸಿದೆ.

 ತಾವು ನಿರ್ಮಿಸಿರುವ ಸಂಗೀತ ಆಲ್ಬಮ್ ಮತ್ತು ವೀಡಿಯೊಗಳಲ್ಲಿ ಪಾಕ್ ಕಲಾವಿದರ ಹಾಡುಗಳಿದ್ದರೆ ಅವನ್ನು ತೆಗೆದು ಹಾಕುವಂತೆ ಎಂಎನ್‌ಎಸ್ ಮ್ಯೂಸಿಕ್ ಕಂಪೆನಿಗಳನ್ನು ಕೇಳಿಕೊಂಡಿದೆ. ಅಲ್ಲದೆ ಪಾಕ್ ಕಲಾವಿದರು ಒಳಗೊಂಡಿರುವ ಕಾರ್ಯಕ್ರಮ, ಪ್ರಚಾರ ಕಾರ್ಯವನ್ನೂ ನಿಷೇಧಿಸಬೇಕು ಎಂದು ಆಗ್ರಹಿಸಿದೆ. ಈ ಹಿನ್ನೆಲೆಯಲ್ಲಿ ಖ್ಯಾತ ಸಂಗೀತ ಸಂಸ್ಥೆಯಾಗಿರುವ ಟಿ-ಸಿರೀಸ್ ಈಗಾಗಲೇ ಪಾಕಿಸ್ತಾನಿ ಕಲಾವಿದರು ಒಳಗೊಂಡಿರುವ ಎರಡು ಹಾಡುಗಳನ್ನು ತಡೆಹಿಡಿದಿದೆ ಎನ್ನಲಾಗಿದೆ.

ಫೆ.15ರಿಂದ ತಮ್ಮ ವಿವಿಧ ಚಾನೆಲ್‌ಗಳಲ್ಲಿ ಪಾಕ್ ಕಲಾವಿದರು ಇರುವ ಯಾವುದೇ ಹಾಡು, ವೀಡಿಯೊ ಅಥವಾ ಪ್ರಚಾರ ಕಾರ್ಯಕ್ರಮಗಳನ್ನು ಪ್ರಸಾರಿಸದಿರಲು ಟಿ-ಸಿರೀಸ್ ನಿರ್ಧರಿಸಿದೆ . ಇದನ್ನು ಇತರ ಸಂಸ್ಥೆಗಳೂ ಅನುಸರಿಸಲಿವೆ ಎಂದು ಎಂಎನ್‌ಎಸ್ ಚಿತ್ರಪಟ ಸೇನೆಯ ಅಧ್ಯಕ್ಷ ಅಮೇಯ್ ಖೋಕರ್ ತಿಳಿಸಿದ್ದಾರೆ. ಪಾಕಿಸ್ತಾನದ ಗಾಯಕರೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಮ್ಯೂಸಿಕ್ ಸಂಸ್ಥೆಗಳಾದ ಟಿ-ಸಿರೀಸ್, ಸೋನಿ ಮ್ಯೂಸಿಕ್, ವೀನಸ್, ಟಿಪ್ಸ್ ಮುಂತಾದ ಸಂಸ್ಥೆಗಳಿಗೆ ಈಗಾಗಲೇ ಈ ಬಗ್ಗೆ ತಿಳಿಸಲಾಗಿದೆ. ಈ ಕೋರಿಕೆಗೆ ಸ್ಪಂದಿಸದಿದ್ದರೆ ನಮ್ಮದೇ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದವರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News