ದೇಶಾದ್ಯಂತ ಭಯದ ನೆರಳಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳು

Update: 2019-02-17 16:04 GMT

ಹೊಸದಿಲ್ಲಿ, ಫೆ.17: ಪುಲ್ವಾಮ ಭಯೋತ್ಪಾದಕ ದಾಳಿಯ ಬಳಿಕ ದೇಶದ ವಿವಿಧೆಡೆ ಕಾಶ್ಮೀರಿಗಳಿಗೆ ಕಿರುಕುಳ ನೀಡಲಾಗುತ್ತಿದೆಯೆಂಬ ವರದಿಗಳು ಹರಿದಾಡುತ್ತಿರುವ ಬಳಿಕ ತಾವು ಭಯಗ್ರಸ್ತರಾಗಿರುವುದಾಗಿ ದಿಲ್ಲಿಯಲ್ಲಿ ವ್ಯಾಸಂಗ ನಡೆಸುತ್ತಿರುವ ಹಲವಾರು ಕಾಶ್ಮೀರಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಪುಲ್ವಾಮ ಭಯೋತ್ಪಾದಕ ದಾಳಿಯ ಬಳಿಕ ರಾಜ್ಯದ ಹೊರಗೆ ವಾಸವಾಗಿರುವ ಹಲವಾರು ಕಾಶ್ಮೀರಿಗಳು ತಾವು ಕಿರುಕುಳಕ್ಕೊಳಗಾಗಿರುವ ಬಗ್ಗೆ ದೂರಿದ್ದಾರೆಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

‘‘ಓರ್ವ ಕಾಶ್ಮೀರಿಯ ಸೈದ್ಧಾಂತಿಕ ಒಲವು ಏನೇ ಇರಲಿ, ಕಾಶ್ಮೀರಿಗನೆಂಬ ಏಕೈಕ ಕಾರಣಕ್ಕೆ ಆತನ, ಜೀವ ಅಪಾಯಕ್ಕೆ ಸಿಲುಕಿದೆ. ಇದು ದೇಶಾದ್ಯಂತ ನಡೆಯುತ್ತಿದೆ. ಡೆಹ್ರಾಡೂನ್ ಆಗಿರಲಿ, ಅಂಬಾಲ ಆಗಿರಲಿ ಅಥವಾ ಬೆಂಗಳೂರು ಆಗಿರಲಿ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಹಾಗೂ ಅವರನ್ನು ಬೇಟೆಯಾಡಲಾಗುತ್ತಿದೆ’’ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಜಮಿಯಾ ಮಿಲಿಯಾ ಇಸ್ಲಾಮಿಯಾದ ಕಾಶ್ಮೀರಿ ವಿದ್ಯಾರ್ಥಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ಮೂಲತಃ ಕಾಶ್ಮೀರದವರಾಗಿರುವ ಜೆಎನ್‌ಯು ಹೋರಾಟಗಾರ್ತಿ ಶೆಹ್ಲಾ ರಶೀದ್ ಅವರು ‘‘ ಭಾರತಾದ್ಯಂತ ಗುಂಪುಗಳು ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸುತ್ತಿವೆ ಹಾಗೂ ಅವರನ್ನು ಅವಾಚ್ಯವಾಗಿ ನಿಂದಿಸುತ್ತಿವೆ, ಅವರನ್ನು ಹೊರಗೋಡಿಸುವ ಹಾಗೂ ಅವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಬೆದರಿಕೆಗಳನ್ನು ಒಡ್ಡಲಾಗುತ್ತಿದೆ. ಪಾಕಿಸ್ತಾನ ಝಿಂದಾಬಾದ್ ಎಂಬುದಾಗಿ ಘೋಷಿಸಿದ್ದಾರೆಂಬ ನೆಪ ನೀಡಿ ಅವರನ್ನು ಪ್ರಕರಣಗಳಲ್ಲಿ ಸಿಕ್ಕಿಸಿಹಾಕಲಾಗುತ್ತಿದೆ ಹಾಗೂ ಪೊಲೀಸರು ಕೂಡಾ ಈ ಸುಳ್ಳು ಆರೋಪಗಳನ್ನು ನಂಬುತ್ತಿದ್ದಾರೆ’’ ಎಂದು ಆರೋಪಿಸಿದ್ದಾರೆ.

ರಾಜಧಾನಿ ದಿಲ್ಲಿಯಲ್ಲಿಯೂ ತಮ್ಮ ಮೇಲೆ ಗುಂಪು ದಾಳಿಗಳು ನಡೆಯುವ ಭೀತಿ, ಕಾಶ್ಮೀರಿ ವಿದ್ಯಾರ್ಥಿಗಳಲ್ಲಿ ಮನೆಮಾಡಿದೆಯೆಂದು ಆಕೆ ಹೇಳಿದ್ದಾರೆ.

‘‘ಭಯೋತ್ಪಾದಕರೆಂಬ ಹಣೆಪಟ್ಟಿ ಕಟ್ಟಿದರೂ ಕೂಡಾ ನಾವೀಗ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಮೇಲೆ ನಡೆಸುವ ಅವಾಚ್ಯ ನಿಂದನೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಹಾಸ್ಟೆಲ್‌ಗಳಲ್ಲಿ ವಾಸಿಸುವವರಿಗಿಂತ ಬಾಡಿಗೆ ವಸತಿಗಳಲ್ಲಿ ವಾಸಿಸುವ ಕಾಶ್ಮೀರಿ ವಿದ್ಯಾರ್ಥಿಗಳಿಗೆ ತಮ್ಮ ಸುರಕ್ಷತೆಯ ಬಗ್ಗೆ ಹೆಚ್ಚಿನ ಭೀತಿಯಿದೆ’’ ಎಂದು ದಿಲ್ಲಿ ವಿವಿಯ ಕಾಶ್ಮೀರಿ ವಿದ್ಯಾರ್ಥಿ ಅನೀಸ್ ಅಹ್ಮದ್ ಹೇಳುತ್ತಾರೆ.

ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಯುವ ಭೀತಿಯ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಪ್ರಾಬಲ್ಯದ ಪ್ರದೇಶಗಳು ಸೇರಿದಂತೆ ರಾಜಧಾನಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆಯೆಂದು ದಿಲ್ಲಿ ಪೊಲೀಸ್ ಉಪ ಆಯುಕ್ತ ಮಧುರ್ ವರ್ಮಾ ಟ್ವೀಟಿಸಿದ್ದಾರೆ.

ದಿಲ್ಲಿ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರು, ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ನಡೆದಿದೆಯನ್ನಲಾದ ದಾಳಿಗಳನ್ನು ಖಂಡಿಸಿದ್ದಾರೆ. ಭಾರತವು ಪುಲ್ವಾಮ ದಾಳಿಯ ಆಘಾತದಿಂದ ಚೇತರಿಸಿಕೊಳ್ಳದಿರುವಾಗಲೇ, ದೇಶದ ವಿವಿಧೆಡೆ ಕಾಶ್ಮೀರಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ ಎಂದು ರಾಜೇಂದ್ರ ಗೌತಮ್ ಟ್ವೀಟಿಸಿದ್ದಾರೆ. ಕೇಂದ್ರ ಗೃಹ ಸಚಿವಾಲವೂ ಶನಿವಾರ ಎಲ್ಲಾ ರಾಜ್ಯಗಳು ಹಾಗೂ ಗೃಹ ಸಚಿವಾಲಯಗಳಿಗೆ ನಿರ್ದೇಶನವೊಂದನ್ನು ಹೊರಡಿಸಿದ್ದು, ಕಾಶ್ಮೀರಿಗಳ ಸುರಕ್ಷತೆ ಹಾಗೂ ಭದ್ರತೆನ್ನು ಖಾತರಿಪಡಿಸುವಂತೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News