ಬಿಹಾರದಲ್ಲಿ ಬಿಜೆಪಿ-ಮಿತ್ರಪಕ್ಷಗಳ ಮುನಿಸು ಮರೆಸಿದ ಪುಲ್ವಾಮ ದಾಳಿ

Update: 2019-02-17 16:05 GMT

ಪಾಟ್ನ, ಫೆ.16: ಪುಲ್ವಾಮದಲ್ಲಿ ನಡೆದ ಭಯೋತ್ಪಾದಕರ ದಾಳಿ ಪ್ರಕರಣವು ಬಿಹಾರದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ನಡುವಿನ ಭಿನ್ನಾಭಿಪ್ರಾಯವನ್ನು ಮರೆಸುವಲ್ಲಿ ಯಶಸ್ವಿಯಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಸೀಟು ಹಂಚಿಕೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಹೆಚ್ಚುತ್ತಿರುವ ಆಗ್ರಹವೂ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಎನ್‌ಡಿಎ ಮಿತ್ರಪಕ್ಷಗಳಾದ ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಲೋಕಜನಶಕ್ತಿ ಪಕ್ಷದ ನಾಯಕ ರಾಮ್‌ವಿಲಾಸ್ ಪಾಸ್ವಾನ್ ಇದೀಗ ತಮ್ಮ ಅಸಮಾಧಾನವನ್ನು ಬದಿಗಿಟ್ಟು, ಕೇಂದ್ರ ಸರಕಾರದ ನಿರ್ಧಾರಕ್ಕೆ ತಮ್ಮ ಬೆಂಬಲವಿದೆ ಎಂದಿದ್ದಾರೆ.

 ರವಿವಾರ ಬಿಹಾರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಚಾಲನೆ ನೀಡಿದರು. ಈ ಸಂದರ್ಭ ವೇದಿಕೆಯಲ್ಲಿದ್ದ ನಿತೀಶ್ ಕುಮಾರ್ , ಪುಲ್ವಾಮದಲ್ಲಿ ಸೈನಿಕರನ್ನು ಗುರಿಯಾಗಿಸಿ ನಡೆದ ಹೇಡಿತನದ ಕೃತ್ಯವನ್ನು ಇಡೀ ದೇಶ ಖಂಡಿಸುತ್ತದೆ ಮತ್ತು ಇದಕ್ಕೆ ಸೂಕ್ತ ಪ್ರತ್ಯುತ್ತರ ನೀಡಬೇಕಾದ ಕಾಲ ಬಂದಿದೆ . ಕೃತ್ಯ ನಡೆಸಿದವರನ್ನು ಕ್ಷಮಿಸಬೇಡಿ ಎಂದು ಹೇಳಿದರು.

 ಇದೇ ಸಂದರ್ಭ ಮಾತನಾಡಿದ ರಾಮವಿಲಾಸ್ ಪಾಸ್ವಾನ್, ಪುಲ್ವಾಮದಲ್ಲಿ ಹರಿದ ಪ್ರತಿಯೊಂದು ಹನಿ ರಕ್ತಕ್ಕೂ ನಾವು ಸೇಡು ತೀರಿಸಿಕೊಳ್ಳದೆ ಬಿಡುವುದಿಲ್ಲ. ಸರಕಾರಕ್ಕೆ ಸಂಸತ್ತಿನಲ್ಲಿ ಬಹುಮತ ಇರುವುದರಿಂದ ಯಾವುದೇ ಕ್ರಮ ಕೈಗೊಳ್ಳಬಹುದು ಎಂದು ಹೇಳಿದರು. ಪುಲ್ವಾಮ ಘಟನೆಯಲ್ಲಿ ಮೃತಪಟ್ಟ ಬಿಹಾರದ ಸೈನಿಕರಾದ ಸಂಜಯ್ ಕುಮಾರ್ ಸಿನ್ಹ ಮತ್ತು ರತನ್ ಕುಮಾರ್ ಠಾಕೂರ್‌ಗೆ ಶ್ರದ್ಧಾಂಜಲಿ ಸಲ್ಲಿಸಿ , ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಿಮ್ಮ ಹೃದಯದಲ್ಲಿ ಜ್ವಲಿಸುತ್ತಿರುವ ಕ್ರೋಧಾಗ್ನಿ ನನ್ನ ಎದೆಯಲ್ಲೂ ಪ್ರಜ್ವಲಿಸುತ್ತಿದೆ ಎಂದು ಹೇಳಿದರು.

 ಅಸ್ಸಾಂನಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಸಿಆರ್‌ಪಿಎಫ್ ಯೋಧರ ಬಲಿದಾನ ವ್ಯರ್ಥವಾಗದು. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿಲ್ಲ . ಈಗ ಇರುವುದು ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಎಂದೂ ರಾಜಿ ಮಾಡಿಕೊಳ್ಳದ ಮೋದಿ ಸರಕಾರ. ಬಿಜೆಪಿ ಸರಕಾರ ಭಯೋತ್ಪಾದಕರಿಗೆ ಸೂಕ್ತ ಪ್ರತ್ಯುತ್ತರ ನೀಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News