ಭಾರತದಲ್ಲಿ ನಿಷೇಧಿತ ಅರ್ಧದಷ್ಟು ಸಂಘಟನೆಗಳಿಗೆ ಪಾಕ್ ನೆರವು: ಅಧಿಕೃತ ದಾಖಲೆಯಿಂದ ಬಯಲು

Update: 2019-02-22 15:33 GMT

ಹೊಸದಿಲ್ಲಿ,ಫೆ.22: ಪಾಕಿಸ್ತಾನ ಉಗ್ರವಾದದ ಕೇಂದ್ರವಾಗಿದ್ದು, ನಿಷೇಧಿತ ಸಂಘಟನೆಗಳ ದೊಡ್ಡ ಸಮೂಹವೇ ಇಲ್ಲಿ ಕಾರ್ಯಾಚರಿಸುತ್ತಿದೆ. ಇವುಗಳಲ್ಲಿ ಇತ್ತೀಚೆಗೆ ಬಹಿಷ್ಕರಿಸಲ್ಪಟ್ಟ ಜಮಾತುದ್ ದಾವಾ ಕೂಡಾ ಸೇರಿದೆ. ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಅರ್ಧದಷ್ಟು ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ಕುಮ್ಮಕ್ಕು ಮತ್ತು ಆರ್ಥಿಕ ನೆರವು ನೀಡುತ್ತಿದೆ ಎಂದು ಅಧಿಕೃತ ವರದಿ ಬಹಿರಂಗಪಡಿಸಿದೆ.

ಪಾಕಿಸ್ತಾನದ ರಾಷ್ಟ್ರೀಯ ಉಗ್ರವಾದ ವಿರೋಧಿ ಪ್ರಾಧಿಕಾರ (ಎನ್‌ಸಿಟಿಎ) ಈವರೆಗೆ 69 ಉಗ್ರ ಸಂಘಟನೆಗಳನ್ನು ನಿಷೇಧಿಸಿದೆ. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಿಸುವ ಹಿಜ್ಬುಲ್ ಮುಜಾಹಿದ್ದೀನ್, ಹರ್ಕತುಲ್ ಮುಜಾಹಿದ್ದೀನ್ ಮತ್ತು ಅಲ್ ಬದ್ರ್ ಮುಂತಾದ ಸಂಘಟನೆಗಳ ಬಗ್ಗೆ ನಿರ್ಲಕ್ಷವಹಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 40 ಸಿಆರ್‌ಪಿಎಫ್ ಯೋಧರನ್ನು ಬಲಿಪಡೆದುಕೊಂಡ ಪುಲ್ವಾಮಾ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಉಗ್ರ ಸಂಘಟನೆಗಳ ವಿರುದ್ಧ ಕಠಿಣ ನಿಲುವು ತಳೆಯುವಂತೆ ಜಾಗತಿಕವಾಗಿ ಎದುರಾದ ಒತ್ತಡಕ್ಕೆ ಮಣಿದ ಪಾಕಿಸ್ತಾನ ಗುರುವಾರ, 2008ರ ಮುಂಬೈ ದಾಳಿಯ ಸಂಚುಕೋರ ಹಫೀಝ್ ಸಯೀದ್‌ನ ಜಮಾತುದ್ ದಾವಾ (ಜೆಯುಡಿ) ಮತ್ತು ಅದರ ಆರ್ಥಿಕ ವಿಭಾಗ ಫಲಹೇ ಇನ್ಸಾನಿಯತ್ ಪ್ರತಿಷ್ಠಾನವನ್ನು ನಿಷೇಧಿಸಿತ್ತು. ಈ ಎರಡು ಸಂಘಟನೆಗಳಿಗಾಗಿ 50,000 ಸ್ವಯಂ ಸೇವಕರು ಮತ್ತು ನೂರಾರು ಕಾರ್ಮಿಕರು ದುಡಿಯುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಭಾರತ ನಿಷೇಧಿಸಿರುವ 41 ಉಗ್ರ ಸಂಘಟನೆಗಳಲ್ಲಿ ಅರ್ಧದಷ್ಟು ಸಂಘಟನೆಗಳಲ್ಲಿ ಅರ್ಧದಷ್ಟು ಸಂಘಟನೆಗಳು ಪಾಕಿಸ್ತಾನ ಮೂಲದವು ಅಥವಾ ಪಾಕಿಸ್ತಾನ ಮೂಲದ ನಾಯಕತ್ವವನ್ನು ಅಥವಾ ಪಾಕಿಸ್ತಾನ ಪ್ರಾಯೋಜಿತವಾಗಿರುತ್ತದೆ ಎಂದು ವರದಿ ತಿಳಿಸಿದೆ. ಜೈಶೆ ಮುಹಮ್ಮದ್, ಲಷ್ಕರೆ ತೈಬಾ, ಹಿಜ್ಬುಲ್ ಮುಜಾಹಿದ್ದೀನ್, ಹರ್ಕತುಲ್ ಮುಜಾಹಿದ್ದೀನ್, ಅಲ್ ಬದ್ರ್, ದುಖ್ತರನೆ ಮಿಲ್ಲತ್, ಬಬ್ಬರ್ ಕಾಲ್ಸಾ ಇಂಟರ್ನ್ಯಾಶನಲ್, ಖಾಲಿಸ್ತಾನ ಕಮಾಂಡೊ ಫೋರ್ಸ್ ಮತ್ತು ಅಂತರ್‌ರಾಷ್ಟ್ರೀಯ ಸಿಖ್ ಯುವ ಒಕ್ಕೂಟ ಇತ್ಯಾದಿಗಳು ಈ ಪಟ್ಟಿಯಲ್ಲಿ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News