ಜೈಶ್ ಮುಹಮ್ಮದ್ ಕಚೇರಿ ಸ್ವಾಧೀನ ಪಡೆದ ಪಾಕ್ ಸರಕಾರ

Update: 2019-02-22 18:32 GMT

ಹೊಸದಿಲ್ಲಿ,ಫೆ.22: ತನ್ನ ನೆಲದ ಮೇಲೆ ಕಾರ್ಯಾಚರಿಸುತ್ತಿರುವ ಉಗ್ರ ಸಂಘಟನೆಗಳ ಮೇಲೆ ನಿಯಂತ್ರಣ ಹೇರಲು ಜಾಗತಿಕ ಮಟ್ಟದಿಂದ ಒತ್ತಡಕ್ಕೆ ಒಳಗಾಗಿರುವ ಪಾಕಿಸ್ತಾನ ಶುಕ್ರವಾರ ಉಗ್ರ ಸಂಘಟನೆ ಜೈಶ್ ಮುಹಮ್ಮದ್‌ನ ಮುಖ್ಯ ಕಚೇರಿಯನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಂಡಿರುವುದಾಗಿ ತಿಳಿಸಿದೆ. ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಹತ್ಯಾದಾಳಿಯ ಹೊಣೆಯನ್ನು ಜೈಶ್ ಮುಹಮ್ಮದ್ ಸಂಘಟನೆ ಹೊತ್ತಿತ್ತು.

ಈ ದಾಳಿಯಲ್ಲಿ 40ಕ್ಕೂ ಅಧಿಕ ಸಿಆರ್‌ಪಿಎಫ್ ಯೋಧರು ಸಾವನ್ನಪ್ಪಿದ್ದರು. ಬಹವಲ್ಪುರದಲ್ಲಿರುವ ಜೈಶ್ ಮುಹಮ್ಮದ್‌ಗೆ ಸೇರಿದ ಮದ್ರಸತುಲ್ ಸಬಿರ್ ಮತ್ತು ಜಮೆ ಮಸ್ಜಿದ್ ಸುಬಾನಲ್ಲಾಹ್‌ಅನ್ನು ನಿಯಂತ್ರಣಕ್ಕೆ ಪಡೆದುಕೊಂಡಿದ್ದು ಅದರ ವ್ಯವಹಾರಗಳನ್ನು ನೋಡಿಕೊಳ್ಳಲು ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಈ ಕ್ಯಾಂಪಸ್‌ನಲ್ಲಿ 600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು 70 ಶಿಕ್ಷಕರಿದ್ದಾರೆ. ಸದ್ಯ ಈ ಕಟ್ಟಡಕ್ಕೆ ಪಂಜಾಬ್ ಪೊಲೀಸರು ಭದ್ರತೆಯನ್ನು ಒದಗಿಸುತ್ತಿದ್ದಾರೆ ಎಂದು ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಪುಲ್ವಾಮಾ ದಾಳಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕಟುಶಬ್ದಗಳಲ್ಲಿ ಟೀಕಿಸಿದ ಹಿನ್ನಲೆಯಲ್ಲಿ ಪಾಕಿಸ್ತಾನ ಈ ಕ್ರಮವನ್ನು ತೆಗೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News