"ನಾವು ಪಾಕಿಸ್ತಾನದಲ್ಲಿಲ್ಲ, ನಮ್ಮ ಮಾಲಕರು ಹಿಂದೂ"

Update: 2019-02-23 10:59 GMT

ಹೊಸದಿಲ್ಲಿ, ಫೆ.23: ಪುಲ್ವಾಮ ದಾಳಿಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಕರಾಚಿ ಬೇಕರಿಯ ನಾಮಫಲಕದಲ್ಲಿರುವ ‘ಕರಾಚಿ’ ಹೆಸರನ್ನು ಸಂಘ ಪರಿವಾರ ಕಾರ್ಯಕರ್ತರ ತಂಡವೊಂದು ಮುಚ್ಚಿಸಿರುವ ಘಟನೆ ನಡೆದಿದೆ.

ಬೇಕರಿಗೆ ಪಾಕಿಸ್ತಾನದ ನಗರದ ಹೆಸರು ಇರುವುದಕ್ಕೆ ಸುಮಾರು 20-25 ಮಂದಿ ಸಂಘ ಪರಿವಾರ ಕಾರ್ಯಕರ್ತರು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಇಂದಿರಾನಗರದಲ್ಲಿರುವ ಬೇಕರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಈ ಬೇಕರಿಯ ಹೆಸರು ಬದಲಿಸುವಂತೆ ಆಗ್ರಹಿಸಿದರು. ಬೇಕರಿ ಆವರಣದಿಂದ ತೆರಳಲು ಸಂಘ ಪರಿವಾರ ಕಾರ್ಯಕರ್ತರ ಗುಂಪು ನಿರಾಕರಿಸಿದ್ದು, ರಾತ್ರಿ 8:30ರವರೆಗೂ ಪ್ರತಿಭಟನೆ ಮುಂದುವರಿಸಿತ್ತು. ಗುಂಪನ್ನು ಸಮಾಧಾನಿಸುವ ಸಲುವಾಗಿ ಸಂಸ್ಥೆಯ ಸಿಬ್ಬಂದಿ ಕೊನೆಗೆ ನಾಮಫಲಕದಲ್ಲಿ ‘ಕರಾಚಿ’ ಎಂಬ ಪದವನ್ನು ಮುಚ್ಚಲು ಕ್ರಮ ಕೈಗೊಂಡು ಭಾರತದ ಧ್ವಜವನ್ನು ಇರಿಸಿದರು. ಆದರೆ ಘಟನೆಯಲ್ಲಿ ಯಾವುದೇ ಹಿಂಸಾಚಾರ ಅಥವಾ ಆಸ್ತಿಪಾಸ್ತಿ ನಷ್ಟದ ವರದಿಯಾಗಿಲ್ಲ.

"ನಮಗೆ ಸೇನೆಯಲ್ಲಿ ಇರುವವರ ಪರಿಚಯ ಇದೆ" ಎಂದು ಪ್ರತಿಭಟನಾಕಾರರು ಹೇಳಿಕೊಂಡಿದ್ದಾರೆ ಎಂದು ಬೇಕರಿಯ ವ್ಯವಸ್ಥಾಪಕರು ನ್ಯೂಸ್ ಮಿನಿಟ್‍ ಗೆ ತಿಳಿಸಿದ್ದಾರೆ. "ನಾವು ಪಾಕಿಸ್ತಾನದಲ್ಲಿದ್ದೇವೆ ಎನ್ನುವುದು ಅವರ ಭಾವನೆ. ಆದರೆ ನಾವು 53 ವರ್ಷಗಳಿಂದ ಈ ಹೆಸರು ಬಳಸುತ್ತಿದ್ದೇವೆ. ಇದರ ಮಾಲಕರು ಹಿಂದೂಗಳು. ಹೆಸರು ಮಾತ್ರ ಕರಾಚಿ ಬೇಕರಿ. ಅವರನ್ನು ಸಮಾಧಾನಿಸುವ ಸಲುವಾಗಿ ನಾವು ಭಾರತೀಯ ಧ್ವಜ ಹಾಕಿದೆವು" ಎಂದು ಅವರು ವಿವರಿಸಿದ್ದಾರೆ.

ಖಣಚಂದ್ ರಾಮನಾನಿ ಎಂಬವರು 1953ರಲ್ಲಿ ಕರಾಚಿ ಬೇಕರಿಯನ್ನು ಹೈದರಾಬಾದ್‍ನಲ್ಲಿ ಆರಂಭಿಸಿದ್ದರು. ಇವರು ದೇಶ ವಿಭಜನೆ ಸಂದರ್ಭದಲ್ಲಿ ಕರಾಚಿಯಿಂದ ವಲಸೆ ಬಂದವರು. ಆ ಬಳಿಕ ಇದು ದೇಶವ್ಯಾಪಿ ಫ್ರಾಂಚೈಸಿಯಾಗಿ ಬೆಳೆದಿದೆ.

ಈಗಾಗಲೇ ಸಿನಿಮಾ ಕಾರ್ಮಿಕರ ಸಂಘ ಪಾಕಿಸ್ತಾನದ ಎಲ್ಲ ಕಲಾವಿದರನ್ನು ನಿಷೇಧಿಸಿದ್ದು, ಪಾಕಿಸ್ತಾನದ ಜತೆಗಿನ ಕ್ರೀಡಾ ಸಂಬಂಧವನ್ನು ಕಡಿದುಕೊಳ್ಳಲು ಬಿಸಿಸಿಐ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News