‘ನನ್ನ ಸಾವಿಗೆ ಮಮತಾ ಬ್ಯಾನರ್ಜಿಯವರೇ ಕಾರಣ’

Update: 2019-02-23 18:02 GMT

ಕೋಲ್ಕತಾ,ಫೆ.23: ಕಳೆದ ಮಂಗಳವಾರ ಇಲ್ಲಿಯ ತನ್ನ ನಿವಾಸದಲ್ಲಿ ಮಣಿಗಂಟನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಗೌರವ ದತ್ ಅವರು ತನ್ನ ಸಾವಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೇ ಕಾರಣ ಎಂದು ಆತ್ಮಹತ್ಯಾ ಪತ್ರದಲ್ಲಿ ಬರೆದಿಟ್ಟಿದ್ದಾರೆ ಎಂದು  ವರದಿಯಾಗಿದೆ.

1986ರ ತಂಡದ ಐಪಿಎಸ್ ಅಧಿಕಾರಿಯಾಗಿದ್ದ ದತ್ ಕಳೆದ ವರ್ಷ ಸ್ವಯಂ ನಿವೃತ್ತಿ ಪಡೆದಿದ್ದರು. ಅವರ ತಂದೆ ಗೋಪಾಲ ದತ್ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಭದ್ರತಾ ಅಧಿಕಾರಿಯಾಗಿದ್ದರು.

ಆತ್ಮಹತ್ಯೆಗೆ ಪ್ರಚೋದನೆಯ ಮೂಲಕ ಮುಖ್ಯಮಂತ್ರಿಗಳೇ ನೇರವಾಗಿ ತನ್ನ ಸಾವಿಗೆ ಹೊಣೆಗಾರರಾಗಿದ್ದಾರೆ ಎಂದು ದತ್ ಪತ್ರದಲ್ಲಿ ಬರೆದಿದ್ದಾರೆ.

 ಮಮತಾ ತನಗೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿರುವ ಅವರು, ತನ್ನ ವಿರುದ್ಧ ವಿಚಾರಣೆ ಬಾಕಿಯಿರುವ ಎರಡು ಪ್ರಕರಣಗಳನ್ನು ಮುಚ್ಚಲು ಮುಖ್ಯಮಂತ್ರಿ ನಿರಾಕರಿಸುತ್ತಿದ್ದಾರೆ. ಒಂದು ಪ್ರಕರಣದ ಕಡತವನ್ನು ಸರಕಾರವು ಉದ್ದೇಶಪೂರ್ವಕವಾಗಿ ಕಳೆದುಹಾಕಿದೆ. ಇನ್ನೊಂದು ಪ್ರಕರಣದಲ್ಲಿ ತನ್ನ ವಿರುದ್ಧದ ಭ್ರಷ್ಟಾಚಾರದ ಆರೋಪವನ್ನು ದೃಢಪಡಿಸಲು ಸಾಧ್ಯವಾಗಿಲ್ಲ. ಸ್ವತಃ ಡಿಜಿಯವರೇ ಕೋರಿಕೊಂಡರೂ ಪ್ರಕರಣಗಳನ್ನು ಮುಚ್ಚಲು ಮುಖ್ಯಮಂತ್ರಿಗಳು ನಿರಾಕರಿಸಿದ್ದಾರೆ ಎಂದಿದ್ದಾರೆ.

ಮಮತಾ 10 ವರ್ಷಗಳ ಕಾಲ ತನ್ನನ್ನು ಬಲಿಪಶುವಾಗಿಸಿದ್ದರು ಮತ್ತು ತನ್ನ ವಿರುದ್ಧ ಪ್ರತೀಕಾರದ ಏಕಮಾತ್ರ ಉದ್ದೇಶದಿಂದ ತನ್ನ ನೈತಿಕ ಸ್ಥೈರ್ಯವನ್ನು ಕುಂದಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಿದ್ದರು. ಅವರ ಪ್ರತೀಕಾರಕ್ಕೆ ಕಾರಣ ಅವರಿಗೇ ಗೊತ್ತು ಎಂದಿರುವ ದತ್,ತಾನು ಪ್ರಾಮಾಣಿಕವಾಗಿ ದುಡಿದಿದ್ದ ಉಳಿತಾಯದ ಹಣವನ್ನೂ ಅವರು ತಡೆಹಿಡಿದಿದ್ದಾರೆ. ಅವರ ದ್ವೇಷಕ್ಕೇ ಸರಿಸಾಟಿ ಯಾರೂ ಇಲ್ಲ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ತಾನು ಸತ್ತ ಮೇಲೆ ಸರಕಾರವು ತನ್ನ ಉಳಿತಾಯದ ಹಣವನ್ನು ತನ್ನ ಕುಟುಂಬಕ್ಕೆ ಬಿಡುಗಡೆ ಮಾಡಲೇಬೇಕಾಗುತ್ತದೆ ಎಂದಿದ್ದಾರೆ.

ಬಂಗಾಳದಲ್ಲಿಯ ಪ್ರಾಮಾಣಿಕ ಅಧಿಕಾರಿಗಳ ಸಮಸ್ಯೆಗಳನ್ನು ಮುಖ್ಯವಾಗಿ ಬಿಂಬಿಸಲು ತಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ. ಗೌರವದೊಂದಿಗೆ ಬದುಕಲು ಸಾಧ್ಯವಿಲ್ಲವಾದರೆ ಗೌರವದಿಂದ ಸಾಯುವುದೇ ಒಳ್ಳೆಯದು ಎಂದು ದತ್ ಪತ್ರದಲ್ಲಿ ಬರೆದಿದ್ದಾರೆ.

ಮಮತಾ ಐಪಿಎಸ್ ಅಧಿಕಾರಿಗಳನ್ನು ಬಳಸಿ ಎಸೆಯುವ ಅತ್ಯಂತ ಅಮಾನವೀಯ ಗುಣವನ್ನು ಹೊಂದಿದ್ದಾರೆ. ಅವರಿಗೆ ಬೇಕಾದವರು ಮಾತ್ರ ಅರಮನೆಯಂತಹ ಬಂಗಲೆಗಳು,ಐಷಾರಾಮಿ ವಾಹನಗಳನ್ನು ಪಡೆಯುತ್ತಾರೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News