ಏಶ್ಯನ್ ಸ್ನೂಕರ್ ಸ್ಪರ್ಧೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ಹೊಸದಿಲ್ಲಿ, ಫೆ.24: ಪುಲ್ವಾಮ ಉಗ್ರ ದಾಳಿಯ ಬಳಿಕ ಉಂಟಾದ ಪಾಕಿಸ್ತಾನ ಆಟಗಾರರ ವೀಸಾ ವಿವಾದದ ಕರಿನೆರಳು ಮತ್ತೊಂದು ಟೂರ್ನಿಯ ಮೇಲೆ ಬಿದ್ದಿದೆ. ಭಾರತದಲ್ಲಿ ನಡೆಯಬೇಕಿದ್ದ ಏಶ್ಯನ್ ಸ್ನೂಕರ್ ಸ್ಪರ್ಧೆಯು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.
10 ರೆಡ್ಸ್ ಏಶ್ಯನ್ ಟೂರ್ ಸ್ನೂಕರ್ ಟೂರ್ನಿಯು ಮಾರ್ಚ್ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ ಟೂರ್ನಿಯ ಸಂಘಟಕರು ಪಾಕಿಸ್ತಾನದ ಆಟಗಾರರಿಗೆ ವೀಸಾ ಒದಗಿಸುವ ಬಗ್ಗೆ ಖಚಿತ ಭರವಸೆ ನೀಡದ ಹಿನ್ನೆಲೆಯಲ್ಲಿ ಟೂರ್ನಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.
ಪಾಕಿಸ್ತಾನ ಆಟಗಾರರಿಗೆ ಭಾರತ ವೀಸಾ ನೀಡಲು ಭರವಸೆ ನೀಡದ ಹಿನ್ನೆಲೆಯಲ್ಲಿ ಸ್ಪರ್ಧೆಯನ್ನು ಮುಂದೂಡಲು ಏಶ್ಯನ್ ಬಿಲಿಯಡ್ಸ್‌ರ್ ಕ್ರೀಡಾ ಒಕ್ಕೂಟ (ಎಸಿಬಿಎಸ್) ನಿರ್ಧರಿಸಿದೆ. ‘‘ ಭಾರತದಲ್ಲಿ ಅನ್ಯ ಕ್ರೀಡಾಕೂಟಗಳಿಗೆ ಉಂಟಾಗುತ್ತಿರುವ ಪರಿಸ್ಥಿತಿಯನ್ನು ಗಮನಿಸಿ ಪಾಕ್ ಆಟಗಾರರಿಗೆ ವೀಸಾ ಸಮಸ್ಯೆಯಾಗುತ್ತಿರುವ ಕುರಿತು ನಾವು ಎಸಿಬಿಎಸ್‌ಗೆ ಮಾಹಿತಿ ನೀಡಿದ್ದೇವೆ. ಹಾಗಾಗಿ ಎಸಿಬಿಎಸ್ ಭಾರತದಲ್ಲಿ ನಡೆಯಬೇಕಿದ್ದ ಏಶ್ಯನ್ ಸ್ನೂಕರ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ನಿರ್ಧರಿಸಿದೆ’’ ಎಂದು ಭಾರತ ಬಿಲಿಯಡ್ಸ್‌ರ್ ಹಾಗೂ ಸ್ನೂಕರ್ ಒಕ್ಕೂಟದ(ಬಿಎಸ್‌ಎಫ್) ಕಾರ್ಯದರ್ಶಿ ಎಸ್. ಸುಬ್ರಮಣಿಯನ್ ಪಿಟಿಐಗೆ ತಿಳಿಸಿದ್ದಾರೆ.
ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿರುವ 24 ಆಟಗಾರರಲ್ಲಿ 6 ಮಂದಿ ಪಾಕಿಸ್ತಾನದವರು ಇಲ್ಲವೇ ಪಾಕಿಸ್ತಾನ ಮೂಲದವರಾಗಿದ್ದಾರೆ. ಅವರು ವೀಸಾಗೆ ಅರ್ಜಿ ಸಲ್ಲಿಸಿಲ್ಲವಾದರೂ ಇಲ್ಲಿಯ ಪರಿಸ್ಥಿತಿಯ ಬಗ್ಗೆ ಎಸಿಬಿಎಸ್‌ಗೆ ಸೂಚನೆ ನೀಡಿದ್ದೇವೆ ಎಂದು ಸುಬ್ರಮಣಿಯನ್ ತಿಳಿಸಿದರು.
ಮೊದಲ ಎರಡು ಹಂತದ ಏಶ್ಯನ್ ಸ್ನೂಕರ್ ಸ್ಪರ್ಧೆಗಳು ಖತರ್ ಹಾಗೂ ಚೀನಾದಲ್ಲಿ ನಡೆದಿವೆ. ಭಾರತ ಕೊನೆಯ ಹಂತದ ಸ್ಪರ್ಧೆಯನ್ನು ನಡೆಸಬೇಕಿದೆ.