ಗಾಯತ್ರಿ, ಸಮಿಯಾ ಶುಭಾರಂಭ
ಹೊಸದಿಲ್ಲಿ, ಫೆ.28: ಹಾಲೆಂಡ್‌ನ ಹಾರ್ಲಿಮ್‌ನಲ್ಲಿ ನಡೆದ ಡಚ್ ಜೂನಿಯರ್ ಇಂಟರ್‌ನ್ಯಾಶನಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಸಮಿಯಾ ಇಮಾದ್ ಫಾರೂಕಿ ಹಾಗೂ ಗಾಯತ್ರಿ ಗೋಪಿಚಂದ್ ಸಹಿತ ಭಾರತದ ಆರು ಶಟ್ಲರ್‌ಗಳು ದ್ವಿತೀಯ ಸುತ್ತಿಗೆ ತಲುಪಿದ್ದಾರೆ.
ಅಂಡರ್-15 ಏಶ್ಯನ್ ಜೂನಿಯರ್ ಚಾಂಪಿಯನ್‌ಶಿಪ್‌ನ ಮಾಜಿ ಚಾಂಪಿಯನ್ ಫಾರೂಕಿ ಬುಧವಾರ ನಡೆದ ಮೊದಲ ಸುತ್ತಿನ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಲಿಸಾ ಕರ್ಟಿನ್ ವಿರುದ್ಧ 21-12, 21-11 ನೇರ ಗೇಮ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಎರಡು ಬಾರಿ ಅಖಿಲ ಭಾರತ ಜೂನಿಯರ್ ರ್ಯಾಂಕಿಂಗ್ ಪ್ರಶಸ್ತಿಗಳನ್ನು ಜಯಿಸಿರುವ ಫಾರ್ಮ್ ನಲ್ಲಿರುವ ಆಟಗಾರ್ತಿ ಗಾಯತ್ರಿ ಕೊರಿಯಾದ ಜೆಯೊಂಗ್ ಚುಂಗ್‌ರಿಂದ ತೀವ್ರ ಪ್ರತಿರೋಧ ಎದುರಿಸಿದ್ದರೂ 21-18, 22-20 ಅಂತರದಿಂದ ಜಯ ಸಾಧಿಸುವಲ್ಲಿ ಯಶಸ್ವಿಯಾದರು.
ಹಲವು ಬಾರಿ ಅಖಿಲ ಭಾರತ ಜೂನಿಯರ್ ರ್ಯಾಂಕಿಂಗ್ ಟೂರ್ನಮೆಂಟ್‌ಗಳನ್ನು ಜಯಿಸಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಮಣಿಪುರದ ಮೈಸ್ನಂ ಮೀರಾಬಾ ಬಾಲಕರ ಸಿಂಗಲ್ಸ್‌ನಲ್ಲಿ ಆಡುವ ಅವಕಾಶ ಪಡೆದಿದ್ದು, 30 ನಿಮಿಷಗಳ ಹೋರಾಟದಲ್ಲಿ ಸ್ವೀಡನ್‌ನ ಲುಡ್ವಿಗ್ ಪೆಟ್ರೆ ಒಲ್ಸನ್ ವಿರುದ್ಧ 21-10, 21-11 ಗೇಮ್‌ಗಳ ಅಂತರದಿಂದ ಗೆಲುವು ಸಾಧಿಸಿದರು.
ಪ್ರಿಯಾಂಶು ರಜಾವತ್, ಮ್ಯಾಗ್ನಸ್ ಕ್ಲಿಂಗ್‌ಗಾರ್ಡ್ ವಿರುದ್ಧ 19-21, 21-18, 21-17 ಅಂತರದಿಂದ ಜಯ ಸಾಧಿಸಿದರೆ, ಸಾಯಿ ಚರಣ್ ಕೊಯಾ, ಕಾಲ್ಲೆ ಫ್ರೆದೋಲಮ್ ವಿರುದ್ಧ 21-11, 21-14 ಅಂತರದಿಂದ ಸುಲಭ ಜಯ ದಾಖಲಿಸಿದ್ದಾರೆ.
ಡಬಲ್ಸ್ ಸ್ಪರ್ಧೆಯಲ್ಲಿ ಭಾರತದ ಮೂರು ಜೋಡಿ ಗೆಲುವಿನ ಆರಂಭ ಪಡೆದಿದೆ.
ಇಶಾನ್ ಭಟ್ನಾಗರ್-ಎಡ್ವಿನ್ ಜಾಯ್ ಹಾಗೂ ನವನೀತ್ ಬೊಕ್ಕಾ-ವಿಷ್ಣು ವರ್ಧನ್ ಗೌಡ್ ಬಾಲಕರ ಡಬಲ್ಸ್‌ನಲ್ಲಿ ಜಯ ಸಾಧಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಛತ್ತೀಸ್‌ಗಡದ ಭಟ್ನಾಗರ್ ಹಾಗೂ ಕೇರಳದ ಬಾಲಕ ಜಾಯ್ 58 ನಿಮಿಷಗಳ ಪಂದ್ಯದಲ್ಲಿ ಮೊದಲ ಗೇಮ್ ಸೋಲಿನಿಂದ ಚೇತರಿಸಿಕೊಂಡು ರಫೆಲ್ ಗಾವೊಯಿಸ್ ಹಾಗೂ ವಿನ್ಸೆಂಟ್ ಝೆಗ್ಲೆರ್ ವಿರುದ್ಧ 16-21, 21-17, 21-17 ಗೇಮ್‌ಗಳ ಅಂತರದಿಂದ ಗೆಲುವು ಪಡೆದಿದ್ದಾರೆ.
ತೆಲಂಗಾಣದ ನವನೀತ್ ಹಾಗೂ ವಿಷ್ಣು ವರ್ಧನ್ ಅವರು ರೆನ್ಸ್ ಲಾಗ್ರೌ ಹಾಗೂ ಡಿಯೊನ್ ವ್ಯಾನ್ ವಿಜ್‌ಲಿಕ್ ವಿರುದ್ಧ 21-14, 21-13 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು.
ಬಾಲಕಿಯರ ವಿಭಾಗದ ಡಬಲ್ಸ್ ಪಂದ್ಯದಲ್ಲಿ ಟ್ರೀಸಾ ಜೊಲ್ಲಿ ಹಾಗೂ ವರ್ಷಿಣಿ ವಿಶ್ವನಾಥ್ ಅವರು ಕರ್ಸ್ಟನ್‌ಡಿ ವಿಟ್ ಹಾಗೂ ಜೈಮಿ ಲೌರೆನ್ಸ್‌ರನ್ನು 21-10, 21-16 ಅಂತರದಿಂದ ಸೋಲಿಸಿದರು.
ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ನವನೀತ್ ಹಾಗೂ ಸಾಹಿತಿ ಬಂಡಿ ಜೋಡಿ ಝೆಂಗ್ ಕ್ಸುನ್‌ಜಿನ್ ಹಾಗೂ ಕ್ಸಿಯಾನ್ ಗೌಹಾಂಗ್ ವಿರುದ್ಧ 21-10, 21-16 ಗೇಮ್‌ಗಳಿಂದ ಗೆಲುವು ದಾಖಲಿಸಿದೆ.