ತುರ್ಕ್‌ಮೆನಿಸ್ತಾನ ವಿರುದ್ಧ ಭಾರತಕ್ಕೆ ಜಯ
►ಟರ್ಕಿಶ್ ಮಹಿಳಾ ಕಪ್ ಫುಟ್ಬಾಲ್
ಅಲನ್ಯಾ(ಟರ್ಕಿ), ಮಾ.1: ಸಂಜು ಅವರ ಹ್ಯಾಟ್ರಿಕ್ ಗೋಲಿನ ಬಲದಿಂದ ಭಾರತ ಮಹಿಳಾ ಫುಟ್ಬಾಲ್ ತಂಡ ತುರ್ಕ್‌ಮೆನಿಸ್ತಾನ ವಿರುದ್ಧ ಟರ್ಕಿಶ್ ಮಹಿಳಾ ಕಪ್‌ನ ದ್ವಿತೀಯ ಪಂದ್ಯದಲ್ಲಿ 10-0 ಗೋಲುಗಳ ಭಾರೀ ಅಂತರದ ಜಯ ಸಾಧಿಸಿ ಬೀಗಿದೆ.
ಭಾರತದ ಪರ ಸಂಜು (17, 37 ಹಾಗೂ 71ನೇ ನಿಮಿಷ) ಅತ್ಯಧಿಕ ಗೋಲು ದಾಖಲಿಸಿದರೆ, ಅಂಜು ತಮಾಂಗ್(51 ಹಾಗೂ 83ನೇ ನಿಮಿಷ) ಹಾಗೂ ರಂಜನಾ (60 ಹಾಗೂ 62ನೇ ನಿಮಿಷ) ತಲಾ ಎರಡು ಗೋಲು ಬಾರಿಸಿದರು. ಡ್ಯಾಂಗ್ಮೆ ಗ್ರೇಸ್ (7ನೇ), ಸುಮಿತ್ರಾ (77ನೇ ನಿಮಿಷ) ಹಾಗೂ ಇಂದುಮತಿ ಕದಿರ್ಸಾನ್(87ನೇ ನಿಮಿಷ) ತಲಾ ಒಂದು ಗೋಲನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ಬುಧವಾರ ಉಝ್ಬೇಕಿಸ್ತಾನ್ ವಿರುದ್ಧ 0-1ರಿಂದ ಸೋತ ಬಳಿಕ ಭಾರತ ಪುಟಿದೆದ್ದಿದೆ.
ಪಂದ್ಯ ಆರಂಭವಾದ 7ನೇ ನಿಮಿಷದಲ್ಲೇ ಮೋಡಿ ಮಾಡಿದ ಡ್ಯಾಂಗ್ಮೆ ಎದುರಾಳಿ ಗೋಲುಪೆಟ್ಟಿಗೆಗೆ ಲಗ್ಗೆಯಿಟ್ಟರು. ಅದಾದ 10 ನಿಮಿಷದ ಬಳಿಕ ಹಾಗೂ ಪ್ರಥಮಾರ್ಧ ಮುಗಿಯಲು ಮೂರು ನಿಮಿಷ ಬಾಕಿಯಿರುವಾಗ ಸಂಜು ಗೋಲು ಗಳಿಸಿ ತಂಡದ ಮುನ್ನಡೆಯನ್ನು 3-0ಗೆ ಹೆಚ್ಚಿಸಿದರು.
ಇಂದುಮತಿ ನಾಯಕತ್ವ ವಹಿಸಿಕೊಂಡಿದ್ದ ಈ ಪಂದ್ಯದಲ್ಲಿ ಭಾರತ ದ್ವಿತೀಯಾರ್ಧದಲ್ಲೂ ತನ್ನ ಆಕ್ರಮಣ ಪ್ರವೃತ್ತಿಯನ್ನು ಮುಂದುವರಿಸಿತು. ಗ್ರೇಸ್ ಹಾಗೂ ರಂಜನಾ ಸೇರಿ ಮತ್ತೆರಡು ಗೋಲುಗಳನ್ನು ಸೇರಿಸಿದರು. 71ನೇ ನಿಮಿಷದಲ್ಲಿ ಸಂಜು ತಮ್ಮ ಮೂರನೇ ಗೋಲು ಬಾರಿಸಿದಾಗ ಭಾರತ ಬಹುತೇಕ ಪಂದ್ಯ ಗೆದ್ದಾಗಿತ್ತು. ಆ ಬಳಿಕ ಸುಮಿತ್ರಾ, ಅಂಜು ಹಾಗೂ ನಾಯಕಿ ಇಂದುಮತಿ ಮತ್ತೆ ತಲಾ ಒಂದೊಂದು ಗೋಲು ದಾಖಲಿಸುವ ಮೂಲಕ ಭಾರತ ಗೋಲುಗಳ ಎರಡಂಕಿಯನ್ನು ತಲುಪುವಂತೆ ಮಾಡಿದರು.
ರವಿವಾರ ಭಾರತ ತಂಡ ರೋಮಾನಿಯ ಸವಾಲನ್ನು ಎದುರಿಸಲಿದೆ.