ಸೆಮಿಗೆ ಲಗ್ಗೆಯಿಟ್ಟ ಕಿರ್ಗಿಯೊಸ್
ಅಕಪಲ್ಕೊ, ಮಾ.1: ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ರಫೆಲ್ ನಡಾಲ್‌ರನ್ನು ಮಣಿಸಿ ಸುದ್ದಿಯಾಗಿದ್ದ ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್ ಗುರುವಾರ ರಾತ್ರಿ ಮತ್ತೊಂದು ದಿಟ್ಟ ಪ್ರದರ್ಶನದಲ್ಲಿ ಸ್ವಿಸ್‌ನ ಸ್ಟಾನ್ ವಾವ್ರಿಂಕ ಅವರನ್ನು ಸೋಲಿಸಿ ಮೆಕ್ಸಿಕೊ ಓಪನ್ ಟೆನಿಸ್‌ನ ಸೆಮಿಫೈನಲ್‌ಗೆ ಪ್ರವೇಶ ಗಿಟ್ಟಿಸಿದ್ದಾರೆ.
ನಾಟಕೀಯವಾಗಿ ನಡೆದ ಪಂದ್ಯದಲ್ಲಿ 17 ಬಾರಿ ಗ್ರಾನ್‌ಸ್ಲಾಮ್ ವಿಜೇತ ನಡಾಲ್‌ಗೆ ಮಣ್ಣುಮುಕ್ಕಿಸಿದ್ದ ಕಿರ್ಗಿಯೊಸ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ವಾವ್ರಿಂಕರನ್ನು 7-5, 6-7(3/7), 6-4 ಸೆಟ್‌ಗಳಿಂದ ಸದೆಬಡಿದು ಉಪಾಂತ್ಯ ಪ್ರವೇಶಿಸಿದರು. ತಮ್ಮ ಮುಂದಿನ ಪಂದ್ಯದಲ್ಲಿ ಅವರು ಜಾನ್ ಇಸ್ನೆರ್ ಅಥವಾ ಜಾನ್ ಮಿಲ್‌ಮನ್ ಅವರನ್ನು ಎದುರಿಸಲಿದ್ದಾರೆ.
ಪ್ರಥಮ ಗೇಮ್‌ನಲ್ಲೇ ಕೈಬೆರಳಿಗೆ ಗಾಯ ಮಾಡಿಕೊಂಡ ಕಿರ್ಗಿಯೊಸ್ ನೋವಿನೊಂದಿಗೆ ಆಡುತ್ತಾ ಅಂತಿಮವಾಗಿ ಪ್ರಥಮ ಸೆಟ್‌ನ್ನು 7-5ರಿಂದ ವಶಪಡಿಸಿಕೊಂಡರು. ಆ ಬಳಿಕ ಎರಡನೇ ಸೆಟ್‌ನಲ್ಲಿ ಪುಟಿದೆದ್ದು ನಿಂತ ವಾವ್ರಿಂಕ 6-7ರಿಂದ ಕೈವಶ ಮಾಡಿಕೊಂಡು ತಿರುಗೇಟು ನೀಡಿದರು. ಈ ಸೆಟ್ ಟೈಬ್ರೇಕರ್‌ವರೆಗೂ ಸಾಗಿತ್ತು. ಮೂರನೇ ಸೆಟ್‌ನಲ್ಲಿ ಪ್ರಬಲ ಹೋರಾಟ ನೀಡಿದ ಕಿರ್ಗಿಯೊಸ್ 6-4ರಿಂದ ಗೆದ್ದು ಪಂದ್ಯವನ್ನು ತಮ್ಮದಾಗಿಸಿಕೊಂಡರು.
► ಝ್ವೆರೆವ್ ಸೆಮಿಫೈನಲ್‌ಗೆ
ಎರಡನೇ ಶ್ರೇಯಾಂಕದ ಅಲೆಕ್ಸಾಂಡರ್ ಝ್ವೆರೆವ್ ಅವರು ಆಸ್ಟ್ರೇಲಿಯದ ಅಲೆಕ್ಸ್ ದಿ ಮಿನಾವರ್ ಅವರನ್ನು 6-4, 6-4 ಸೆಟ್‌ಗಳಿಂದ ಮಣಿಸಿ ಸತತ ಎರಡನೇ ವರ್ಷ ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಮಿನಾವರ್ ವಿರುದ್ಧ 4-0 ಹೆಡ್-ಟು-ಹೆಡ್ ಗೆಲುವಿನ ದಾಖಲೆ ಹೊಂದಿರುವ ಝ್ವೆರೆವ್ ಮೂರು ಪಂದ್ಯಗಳಲ್ಲಿ ಒಂದೂ ಸೆಟ್ ಬಿಟ್ಟುಕೊಟ್ಟಿಲ್ಲ. ತಮ್ಮ ಸೆಮಿಫೈನಲ್ ಹಣಾಹಣಿಯಲ್ಲಿ ಅವರು ಬ್ರಿಟನ್‌ನ ಕ್ಯಾಮರೂನ್ ನಾರ್ರಿ ಅವರ ಸವಾಲಿಗೆ ಸಜ್ಜಾಗಲಿದ್ದಾರೆ. ಇನ್ನೊಂದೆಡೆ ನಾರ್ರಿ ಅಮೆರಿಕದ ಮೆಕೆಂಝಿ ಮೆಕ್‌ಡೊನಾಲ್ಡ್‌ಗೆ 6-3, 6-2 ಸೆಟ್‌ಗಳ ಸೋಲುಣಿಸಿದ್ದಾರೆ.