ಕಳಪೆ ಆಹಾರ ಕೊಡಿಸಿ ಲಾಭಮಾಡಿಕೊಳ್ಳುವ ಬಸ್ಸಿನವರು

Update: 2019-03-01 18:13 GMT

ಮಾನ್ಯರೇ,

ಕರ್ನಾಟಕ ಸರಕಾರದ ರಸ್ತೆ ಸಾರಿಗೆ ಇಲಾಖೆಯ ರಾಜಹಂಸ, ಐರಾವತ, ವೇಗದೂತ ಮೊದಲಾದ ಬಸ್ಸುಗಳು ಪ್ರತಿ ಜಿಲ್ಲಾ, ತಾಲೂಕು ಕೇಂದ್ರಗಳಿಂದ ದೂರ ದೂರದ ಊರುಗಳಿಗೆ ಸಂಚರಿಸುತ್ತವೆ. ಪ್ರಯಾಣವು ದೀರ್ಘವಾದುದರಿಂದ, ತಿಂಡಿಯ ಊಟದ ಸಮಯದಲ್ಲಿ, ಬಸ್ಸಿನ ಚಾಲಕರು, ಸಂಚಾರದ ಹಾದಿಯಲ್ಲಿ ಸಿಗುವ ಊರಿನ ಹೊಟೇಲೊಂದರ ಮುಂದೆ, ಪ್ರಯಾಣಿಕರ ಅನುಕೂಲಕ್ಕಾಗಿ ನಿಲುಗಡೆಗೊಳಿಸುತ್ತಾರೆ. ಅವರು ನಿಲುಗಡೆಗೊಳಿಸುವ ಅದೆಷ್ಟೋ ಹೊಟೇಲ್‌ಗಳಲ್ಲಿ ಪ್ರಯಾಣಿಕರಿಗೆ ಉತ್ತಮವಾದ ಸೇವೆ ಮಾಲಕರು ನೀಡುವುದಿಲ್ಲ. ಯಾವತ್ತೋ ಮಾಡಿದ ತಿಂಡಿ ತಿನಿಸುಗಳನ್ನು ಪ್ರಯಾಣಿಕರಿಗೆ ನೀಡುವುದುಂಟು. ತಿನಿಸುಗಳ ಬೆಲೆಯು ಅಧಿಕವಾಗಿರುತ್ತದೆ. ಅವರಿಗೆ ಪ್ರಯಾಣಿಕರೆಲ್ಲರೂ ನಿತ್ಯದ ಗಿರಾಕಿಗಳಾಗಿರದೆ, ಅಪರೂಪದ ಗಿರಾಕಿಗಳಾಗಿರುತ್ತಾರೆ. ಇಂದು ಬಂದವರು ನಾಳೆಗೆ ಬರುವುದಿಲ್ಲ ಎನ್ನುವುದು ಅವರ ಭಾವನೆ. ಹೀಗೆ ಹೊಟೇಲ್ ಮಾಲಕರು ಹಗಲು ದರೋಡೆ ಮಾಡಿ ಬಿಡುತ್ತಾರೆ. ದಿನವೊಂದಕ್ಕೆ ಹತ್ತಾರು ಪ್ರಯಾಣಿಕರ ಬಸ್ಸುಗಳು ಹೋಟೆಲುಗಳ ಮುಂದೆ ನಿಲ್ಲುತ್ತವೆ. ನೂರಾರು ಪ್ರಯಾಣಿಕರು ಅಧಿಕ ಹಣ ಕೊಟ್ಟು ಕಳಪೆ ಗುಣಮಟ್ಟದ ಆಹಾರ ಸೇವನೆ ಮಾಡ ಬೇಕಾದ ಪರಿಸ್ಥಿತಿ ರಾಜ್ಯದ ಬಹುತೇಕ ಹೊಟೇಲ್‌ಗಳಲ್ಲಿ ಇರುವುದು ಕಂಡು ಬಂದಿದೆ. ಇಂತಹ ಕಳಪೆ ಗುಣಮಟ್ಟದ ಆಹಾರ ಸೇವನೆಯಿಂದ ಉದರ ಸಂಬಂಧಿ ಕಾಯಿಲೆಗಳು ಉಂಟಾಗುವ ಸಾಧ್ಯತೆ ಇರುತ್ತವೆ. ಪ್ರಯಾಣಿಕರು ಈ ಅವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಲು ಸಮಯದ ಅವಕಾಶವೂ ಇರುವುದಿಲ್ಲ.

ಬಸ್ಸಿನ ಚಾಲಕ, ನಿರ್ವಾಹಕ ಮತ್ತು ಹೊಟೇಲ್ ಮಾಲಕರ ನಡುವೆ ಒಂದು ರೀತಿಯ ಲಾಭದ ಒಪ್ಪಂದವು ಇರುತ್ತದೆ. ಬಸ್ಸನ್ನು ಹೊಟೇಲ್‌ನ ಮುಂದೆ ನಿಲುಗಡೆ ಮಾಡಿದಲ್ಲಿ ಚಾಲಕ, ನಿರ್ವಾಹಕರಿಗೆ ಬೇಕಾದ್ದನ್ನು ಉಚಿತವಾಗಿ ಹೊಟ್ಟೆ ತುಂಬ ಉಣ್ಣಲು ಮಾಲಕನು ನೀಡುತ್ತಾನೆ. ಅದಲ್ಲದೆ, ನೂರು ಇನ್ನೂರು ರೂಪಾಯಿಗಳನ್ನು ಚಾಲಕರ ಜೇಬಿಗೂ ತುರುಕಿ, ಸಂತೋಷಗೊಳಿಸುತ್ತಾರೆ. ಇವರ ಲಾಭದ ಲೆಕ್ಕಾಚಾರದಿಂದ ಪ್ರಯಾಣಿಕರು ಮೋಸಕ್ಕೆ ಬಲಿಯಾಗುತ್ತಿದ್ದಾರೆ. ಕೆಎಸ್ಸಾರ್ಟಿಸಿ ಇಲಾಖೆ ಹಾಗೂ ಆಹಾರ ಇಲಾಖೆಯವರು ಪ್ರಯಾಣಿಕರು ಊಟ ಉಪಾಹಾರ ಸೇವಿಸಲು ಬಸ್ಸು ನಿಲುಗಡೆಗೊಳಿಸುವ ಹೊಟೇಲ್‌ಗಳ ಸ್ವಚ್ಛತೆ, ಆಹಾರದ ಗುಣಮಟ್ಟ, ದರಪಟ್ಟಿಗಳನ್ನು ಪರಿಶೀಲಸುವಂತಾಗಬೇಕು. ಕಳಪೆ ಮಟ್ಟದ ಸೇವೆ ಎಂದು ತಿಳಿದು ಬಂದಾಗ ಬಸ್ಸಿನ ಚಾಲಕರಿಗೆ ಆ ಸ್ಥಳದಲ್ಲಿ ನಿಲುಗಡೆಗೊಳಿಸದಂತೆ ಆದೇಶಿಸಬೇಕು. 

Writer - ತಾರಾನಾಥ್ ಮೇಸ್ತ ಶಿರೂರು

contributor

Editor - ತಾರಾನಾಥ್ ಮೇಸ್ತ ಶಿರೂರು

contributor

Similar News