ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತದ ಸುಕೋಯ್ ಯುದ್ಧವಿಮಾನ

Update: 2019-03-05 03:38 GMT

ಹೊಸದಿಲ್ಲಿ, ಮಾ.5: ಪಾಕಿಸ್ತಾನದ ಮಾನವರಹಿತ ಡ್ರೋನ್ ಒಂದನ್ನು ಭಾರತೀಯ ಸುಕೋಯ್ ಯುದ್ಧವಿಮಾನ ರಾಜಸ್ಥಾನದ ಅಂತಾರಾಷ್ಟ್ರೀಯ ಗಡಿ ಬಳಿ ಹೊಡೆದುರುಳಿಸಿದೆ. ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಜೆಇಎಂ ಉಗ್ರರ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ಫೆಬ್ರವರಿ 26ರಂದು ನಡೆಸಿದ ದಾಳಿಯ ಬಳಿಕ ನಡೆದ ಮೂರನೇ ಇಂಥ ಘಟನೆ ಇದಾಗಿದೆ.

ಸೋಮವಾರ ಪೂರ್ವಾಹ್ನ 11:30ರ ವೇಳೆಗೆ ಭಾರತದ ವಾಯುಪ್ರದೇಶ ಉಲ್ಲಂಘನೆಯಾಗಿದ್ದನ್ನು ವಾಯು ಸುರಕ್ಷಾ ರಾಡರ್ ಪತ್ತೆ ಮಾಡಿದ ತಕ್ಷಣ ಸೂರತ್‌ಗಢ ಮತ್ತು ನಳ ವಾಯುನೆಲೆಗಳಿಂದ ಚಿಮ್ಮಿದ ಭಾರತೀಯ ಯುದ್ಧವಿಮಾನಗಳು ಈ ಡ್ರೋನ್ ಅನ್ನು ಹೊಡೆದುರುಳಿಸಿದವು. "ಅಪರಿಚಿತ ಹಾರುವ ಸಾಧನವೊಂದು ಯುಎವಿ (ಮಾನವರಹಿತ ವೈಮಾನಿಕ ವಾಹನ) ವೇಗದಲ್ಲಿ ಭಾರತೀಯ ವಾಯುಪ್ರದೇಶದಲ್ಲಿ ಹಾರಾಡುತ್ತಿತ್ತು. ಇದನ್ನು ಸುಕೋಯ್-30 ಎಂಕೆಐನಿಂದ ಉಡಾಯಿಸಿದ ವಾಯು ಕ್ಷಿಪಣಿಯಿಂದ ಉರುಳಿಸಲಾಯಿತು. ಆದರೆ ಅದರ ಅವಶೇಷಗಳು ಗಡಿಯಾಚೆಗೆ ಪತನವಾದ ಹಿನ್ನೆಲೆಯಲ್ಲಿ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ" ಎಂದು ಮೂಲಗಳು ಹೇಳಿವೆ.

ಫೆಬ್ರವರಿ 26ರಂದು ವಾಯುದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನಿ ಯುಎವಿಯೊಂದನ್ನು ಗುಜರಾತ್‌ನ ಕಛ್ ಗಡಿ ಬಳಿ ಉರುಳಿಸಲಾಗಿತ್ತು. ಇದಾದ ಒಂದೆರಡು ದಿನಗಳಲ್ಲಿ ರಾಜಸ್ಥಾನದ ಬರ್ಮೆರ್ ಗಡಿಯಲ್ಲಿ ಇಂಥದ್ದೇ ಮತ್ತೊಂದು ಡ್ರೋನ್ ಉರುಳಿಸಲಾಗಿತ್ತು. ರಾಜಸ್ಥಾನ ಗಡಿಯಲ್ಲಿ ನಮ್ಮ ರಕ್ಷಣಾ ವ್ಯವಸ್ಥೆಯನ್ನು ಪರೀಕ್ಷಿಸುವ ಮೂಲಕ ಒತ್ತಡ ಹೇರಲು ಪ್ರಯತ್ನಿಸಲಾಗುತ್ತಿದೆ" ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಉಭಯ ದೇಶಗಳ ಪಡೆಗಳು ಗಡಿಯಲ್ಲಿ ಕಾರ್ಯಾಚರಣೆಗೆ ಸನ್ನದ್ಧ ಸ್ಥಿತಿಯಲ್ಲಿದ್ದು, ಗಡಿಯುದ್ದಕ್ಕೂ ಯಾಂತ್ರೀಕೃತ ನಿಯೋಜನೆ ಮಾಡಲಾಗಿದೆ. ನಮ್ಮ ಕಡೆಯಿಂದ ದೊಡ್ಡ ಪ್ರಮಾಣದಲ್ಲಿ ಪಡೆ ನಿಯೋಜನೆ ಮಾಡಿಲ್ಲವಾದರೂ, ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News