ಬಿಜೆಪಿ ಮೊದಲ ಪಟ್ಟಿ: 35 ಅಭ್ಯರ್ಥಿಗಳಿಗೆ ಕ್ರಿಮಿನಲ್ ಹಿನ್ನೆಲೆ

Update: 2019-03-22 10:16 GMT

ಹೊಸದಿಲ್ಲಿ, ಮಾ.22: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ 184 ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದ್ದು, ಈ ಪೈಕಿ ಶೇಕಡ 19ರಷ್ಟು ಮಂದಿ ಅಂದರೆ 35 ಅಭ್ಯರ್ಥಿಗಳು, 2014ರ ಚುನಾವಣೆಯಲ್ಲೇ ತಮ್ಮ ವಿರುದ್ಧ ಅಪರಾಧ ಪ್ರಕರಣಗಳು ಇರುವುದನ್ನು ಘೋಷಿಸಿಕೊಂಡವರಾಗಿದ್ದಾರೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಅಫಿದಾವಿತ್‍ಗಳನ್ನು ವಿಶ್ಲೇಷಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ ಎಂದು news18.com ವರದಿ ಮಾಡಿದೆ.

ಬಿಜೆಪಿ ಕಳೆದ ಬಾರಿ ಕಣಕ್ಕಿಳಿಸಿದವರಲ್ಲಿ ಒಟ್ಟು 78 ಮಂದಿಗೆ ಮತ್ತೆ ಸ್ಪರ್ಧಿಸಲು ಅವಕಾಶ ನೀಡಿದ್ದು, ಇವರಲ್ಲಿ ಅಪರಾಧ ಹಿನ್ನೆಲೆಯ 35 ಮಂದಿ ಕೂಡಾ ಸೇರಿದ್ದಾರೆ. ಇತರ 106 ಮಂದಿ ಅಭ್ಯರ್ಥಿಗಳ ಹಿನ್ನೆಲೆಯನ್ನು ಇನ್ನೂ ವಿಶ್ಲೇಷಿಸಬೇಕಿದ್ದು, ಅವರು ನಾಮಪತ್ರ ಸಲ್ಲಿಸಿದ ಬಳಿಕ, ಅಫಿದಾವಿತ್ ‍ಗಳನ್ನು ಪರಿಶೀಲಿಸಲಾಗುತ್ತದೆ ಎಂದು news18.com ಹೇಳಿದೆ.

ಉಳಿದ ಎಲ್ಲ 106 ಹೊಸ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಬಳಿಕ ಅಪರಾಧ ಹಿನ್ನೆಲೆ ಇರುವ ಅಭ್ಯರ್ಥಿಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ. ಬಿಜೆಪಿ ಘೋಷಿಸಿರುವ 184 ಮಂದಿಯ ಪೈಕಿ 18 ಮಹಿಳೆಯರಿದ್ದಾರೆ.

2014ರಲ್ಲಿ ಸಲ್ಲಿಸಿದ ಅಫಿದಾವಿತ್‍ನ ಪ್ರಕಾರ, ಮಹಾರಾಷ್ಟ್ರದ ಚಂದ್ರಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಂಸರಾಜ್ ಗಂಗಾರಾಮ್ ಅಹಿರ್ ವಿರುದ್ಧ ಗರಿಷ್ಠ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಇವರ ವಿರುದ್ಧ ಒಟ್ಟು 11 ಅಪರಾಧ ಪ್ರಕರಣಗಳಿವೆ. ಅಹಿರ್ ಅವರು ಗೃಹಖಾತೆಯ ರಾಜ್ಯ ಸಚಿವರು!... ಒಡಿಶಾದ ಬಾಲಸೋರ್‍ನ ಪ್ರತಾಪ್ ಸಾರಂಗಿ ವಿರುದ್ಧ 10 ಪ್ರಕರಣಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News