ಚಲಾವಣೆಯಲ್ಲಿರುವ ನೋಟುಗಳ ಪ್ರಮಾಣ ನೋಟು ರದ್ದತಿಯ ಮೊದಲಿಗಿಂತ ಶೇ.19ರಷ್ಟು ಹೆಚ್ಚಳ

Update: 2019-03-22 10:45 GMT

ಹೊಸದಿಲ್ಲಿ, ಮಾ.22: ದೇಶದ ಆರ್ಥಿಕತೆಯಲ್ಲಿ ಚಲಾವಣೆಯಲ್ಲಿರುವ ನಗದು ಪ್ರಮಾಣ 2019ರ ಮಾರ್ಚ್ 15ರ ವೇಳೆಗೆ, ನೋಟು ರದ್ದತಿ ಅವಧಿಯಲ್ಲಿ ಇದ್ದ ಪ್ರಮಾಣಕ್ಕಿಂತ ಶೇಕಡ 19.14ರಷ್ಟು ಹೆಚ್ಚಿದೆ. 2016ರ ನವೆಂಬರ್ 4ರ ವೇಳೆಗೆ ದೇಶದಲ್ಲಿ 17.97 ಲಕ್ಷ ಕೋಟಿ ರೂಪಾಯಿ ನೋಟುಗಳು ಚಲಾವಣೆಯಲ್ಲಿದ್ದವು. ಇದೀಗ ಒಟ್ಟು 21.14 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳು ಚಲಾವಣೆಯಲ್ಲಿವೆ.

ಡಿಜಿಟಲ್ ವಹಿವಾಟು ಹೆಚ್ಚಳವಾಗಿದ್ದರೂ, ಕಳೆದ ಒಂದು ವರ್ಷದಲ್ಲಿ ಚಲಾವಣೆಯಲ್ಲಿರುವ ನಗದು ಪ್ರಮಾಣ ಮೂರು ಲಕ್ಷ ಕೋಟಿ ರೂಪಾಯಿಗಳಷ್ಟು ಏರಿಕೆ ಕಂಡಿದೆ. 2018ರ ಮಾರ್ಚ್ ವೇಳೆಗೆ 18.29 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟು ಚಲಾವಣೆಯಲ್ಲಿತ್ತು ಎಂದು ಆರ್‍ಬಿಐನಿಂದ ಲಭ್ಯವಾಗಿರುವ ಅಂಕಿ ಅಂಶಗಳಿಂದ ಕಂಡುಬಂದಿದೆ. 500 ಮತ್ತು 1000 ರೂಪಾಯಿ ಮೌಲ್ಯದ ನೋಟುಗಳನ್ನು 2016ರ ನವೆಂಬರ್‍ನಲ್ಲಿ ಚಲಾವಣೆಯಿಂದ ವಾಪಾಸು ಪಡೆದ ಬಳಿಕ 2017ರ ಜನವರಿಯಲ್ಲಿ ಚಲಾವಣೆಯಲ್ಲಿರುವ ನೋಟುಗಳ ಪ್ರಮಾಣ 9 ಲಕ್ಷ ಕೋಟಿ ರೂಪಾಯಿಗೆ ಇಳಿದಿತ್ತು.

ಸರ್ಕಾರ ಹಾಗೂ ಆರ್‍ ಬಿಐ "ನಗದು ರಹಿತ ಸಮಾಜ" ನಿರ್ಮಿಸುವ ನಿಟ್ಟಿನಲ್ಲಿ ಒತ್ತು ನೀಡಿ ಪಾವತಿಗಳ ಡಿಜಿಟಲೀಕರಣಕ್ಕೆ ಹಾಗೂ ವಿವಿಧ ವಹಿವಾಟುಗಳಲ್ಲಿ ನಗದು ವ್ಯವಹಾರವನ್ನು ನಿಷೇಧಿಸಿದ್ದರೂ, ನಗದು ಪ್ರಮಾಣ ಏರಿಕೆಯಾಗುತ್ತಲೇ ಇದೆ. ನೋಟು ರದ್ದತಿಗೆ ಮುಖ್ಯ ಕಾರಣ ಕಳ್ಳನೋಟು, ಕಪ್ಪುಹಣ ಮತ್ತು ಆರ್ಥಿಕತೆಯಲ್ಲಿ ಅಧಿಕ ಪ್ರಮಾಣದ ನಗದು ಇದ್ದುದು ಎಂದು ಸರ್ಕಾರ ಪ್ರತಿಪಾದಿಸುತ್ತಾ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News