×
Ad

ಸಿಂಧು, ಶ್ರೀಕಾಂತ್ ಮೇಲೆ ಭರವಸೆಯ ಭಾರ

Update: 2019-03-25 23:54 IST

ಹೊಸದಿಲ್ಲಿ, ಮಾ.25: ಮಾಜಿ ಚಾಂಪಿಯನ್ ಪಿ.ವಿ.ಸಿಂಧು ಹಾಗೂ ಕಿಡಂಬಿ ಶ್ರೀಕಾಂತ್ ಮಂಗಳವಾರದಿಂದ ಇಲ್ಲಿ ಆರಂಭವಾಗುವ ಇಂಡಿಯಾ ಓಪನ್ ಟೂರ್ನಿಯಲ್ಲಿ ಭಾರತದ ಪರ ಕಣಕ್ಕಿಳಿಯುವ ಪ್ರಮುಖ ಆಟಗಾರರಾಗಿದ್ದಾರೆ.

ಗಾಯದ ಹಿನ್ನೆಲೆಯಲ್ಲಿ ಸುಮಾರು 2.41 ಕೋ.ರೂ. ಬಹುಮಾನ ಮೊತ್ತದ ಟೂರ್ನಿಯಿಂದ ಪ್ರಮುಖ ತಾರೆ ಸೈನಾ ನೆಹ್ವಾಲ್ ಹೊರಗುಳಿದಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿಶ್ವ ಟೂರ್ ಫೈನಲ್ಸ್ ಚಾಂಪಿಯನ್ ಪಟ್ಟ ಧರಿಸಿದ್ದ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು, ಈ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತೆಯಾಗಿದ್ದಾರೆ. ಆಲ್ ಇಂಗ್ಲೆಂಡ್ ಚಾಂಪಿಯನ್ ಚೀನಾದ ಯುಫೆಯ್ ಗಾಯದ ಕಾರಣ ಟೂರ್ನಿಗೆ ಅಲಭ್ಯವಾಗಿರುವುದರಿಂದ ಈ ಶ್ರೇಯ ಸಿಂಧುಗೆ ಒಲಿದಿದೆ.

ಜಪಾನ್ ಆಟಗಾರರ ಅಲಭ್ಯತೆಯೂ ಸಿಂಧುಗೆ ವರವಾಗುವುದನ್ನು ನಿರೀಕ್ಷಿಸಲಾಗಿದೆ. ಸಿಂಧು ತನ್ನ ಮೊದಲ ಪಂದ್ಯದಲ್ಲಿ ಭಾರತದವರೇ ಆದ ಮುಗ್ಧಾ ಅಗ್ರೆ ಅವರನ್ನು ಎದುರಿಸಲಿದ್ದು, ಇಲ್ಲಿ ವಿಜಯ ಸಾಧಿಸಿದರೆ ಕ್ವಾರ್ಟರ್‌ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಡ್ ಅವರ ಸವಾಲಿಗೆ ಸಜ್ಜಾಗುವ ನಿರೀಕ್ಷೆಯಿದೆ.

ಯುವ ತಾರೆಯರಾದ ವೃಷಾಲಿ ಗುಮ್ಮಡಿ ಹಾಗೂ ಸಾಯಿ ಉತ್ತೇಜಿತಾ ರಾವ್ ಚುಕ್ಕಾ ಕೂಡ ಮಹಿಳಾ ಸಿಂಗಲ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಳೆದ 17 ತಿಂಗಳಿನಿಂದ ಪದಕದ ಬರ ಎದುರಿಸುತ್ತಿರುವ ಮೂರನೇ ಶ್ರೇಯಾಂಕದ ಭಾರತದ ಸಿಂಗಲ್ಸ್ ಆಟಗಾರ ಕಿಡಂಬಿ ಶ್ರೀಕಾಂತ್‌ಗೆ ಈ ಪಂದ್ಯಾವಳಿ ಮಹತ್ವದ್ದಾಗಿದೆ. ತಮ್ಮ ಮೊದಲ ಪಂದ್ಯದಲ್ಲಿ 26 ವರ್ಷದ ಶ್ರೀಕಾಂತ್ ಹಾಂಕಾಂಗ್‌ನ ವಾಂಗ್ ವಿಂಗ್ ಕಿ ವಿನ್ಸೆಂಟ್ ಅವರನ್ನು ಎದುರಿಸಲಿದ್ದಾರೆ. ಅಲ್ಲಿ ಗೆದ್ದರೆ ಸಹ ಆಟಗಾರರಾದ ಸಮೀರ್ ವರ್ಮಾ ಅಥವಾ ಬಿ.ಸಾಯಿ ಪ್ರಣೀತ್ ಅವರನ್ನು ಎದುರಿಸುವ ಸಾಧ್ಯತೆಯಿದೆ. 5ನೇ ಶ್ರೇಯಾಂಕದ ಸಮೀರ್ ಅವರು ಡೆನ್ಮಾರ್ಕ್‌ನ ರಾಸ್ಮಸ್ ಗೆಮ್ಕೆ ಅವರನ್ನು ಎದುರಿಸಿದರೆ, ಪ್ರಣೀತ್ ಕ್ವಾಲಿಫೈಯರ್ ಆಟಗಾರರನ್ನು ಎದುರಿಸಲಿದ್ದಾರೆ.

►ಭಾರತ ಪ್ರತಿನಿಧಿಸಲಿರುವ ಹಲವು ಆಟಗಾರರು

ಆರ್.ಎಮ್.ವಿ. ಗುರುಸಾಯಿದತ್ತ, ಎಚ್.ಎಸ್. ಪ್ರಣಯ್, ಶುಭಾಂಕರ್ ಡೇ, ಅಜಯ್ ಜಯರಾಮ್ ಹಾಗೂ ಪರುಪಳ್ಳಿ ಕಶ್ಯಪ್ ಕೂಡ ಭಾರತದ ಪರವಾಗಿ ಸಿಂಗಲ್ಸ್‌ನಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರೆಡ್ಡಿ, ಚಿರಾಗ್ ಶೆಟ್ಟಿ ಹಿಂದೆ ಸರಿದಿದ್ದು, ಮನು ಅತ್ರಿ ಹಾಗೂ ಬಿ. ಸುಮಿತ್ ರೆಡ್ಡಿ ಹಾಗೂ ಅರ್ಜುನ್ ಎಂ.ಆರ್. ರಾಮಚಂದ್ರ ಶ್ಲೋಕ್ ಈ ವಿಭಾಗದಲ್ಲಿ ಕಣಕ್ಕಿಳಿಯುವ ಪ್ರಮುಖ ಜೋಡಿಯಾಗಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ -ಎನ್.ಸಿಕ್ಕಿ ರೆಡ್ಡಿ, ಮೇಘನಾ ಜಕ್ಕಂಪುಡಿ-ಪೂರ್ವಿಶಾ ಎಸ್.ರಾಮ್ ಸ್ಪರ್ಧಿಸಲಿದ್ದಾರೆ.

ಪ್ರಣವ್ ಜೆರ್ರಿ ಚೋಪ್ರಾ - ಸಿಕ್ಕಿ ಜೋಡಿಯು ಮಿಶ್ರ ಡಬಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News