ಬಿಜೆಪಿಗೆ ಮತ ನೀಡದಂತೆ ಅಪೀಲು ಮಾಡಲಿರುವ 100ಕ್ಕೂ ಹೆಚ್ಚು ಚಿತ್ರ ತಯಾರಕರು
ಹೊಸದಿಲ್ಲಿ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡದಂತೆ ಜನತೆಗೆ ಅಪೀಲು ಮಾಡುವ ಸಲುವಾಗಿ ದೇಶಾದ್ಯಂತದ ಸುಮಾರು ಒಂದು ನೂರಕ್ಕೂ ಅಧಿಕ ಸ್ವತಂತ್ರ ಚಿತ್ರ ತಯಾರಕರು 'ಸೇವ್ ಡೆಮಾಕ್ರೆಸಿ' ಎಂಬ ಸಂಘಟನೆಯಡಿಯಲ್ಲಿ ಒಂದಾಗಿದ್ದಾರೆ.
ಈ ಸಂಘಟನೆಯಲ್ಲಿ ಖ್ಯಾತ ಚಿತ್ರ ತಯಾರಕರಾದ ವೆಟ್ರಿ ಮಾರನ್, ಆನಂದ್ ಪಟವರ್ಧನ್, ಸನಲ್ ಕುಮಾರ್ ಶಶಿಧರನ್, ಸುದೇವನ್, ದೀಪಾ ಧನರಾಜ್, ಗುರುವಿಂದರ್ ಸಿಂಗ್, ಪುಷ್ಪೇಂದ್ರ ಸಿಂಗ್, ಕಬೀರ್ ಸಿಂಗ್ ಚೌಧುರಿ, ಅಂಜಲಿ ಮೊಂತೇರೋ, ಪ್ರವೀಣ್ ಮೊರ್ಚಲೆ, ದೇವಶಿಷ್ ಮಖಿಜ ಹಾಗೂ ಬೀನಾ ಪೌಲ್ ಇದ್ದಾರೆ.
ಈ ಚಿತ್ರ ತಯಾರಕರ ಹೇಳಿಕೆಯನ್ನು ಆರ್ಟಿಸ್ಟ್ ಯುನೈಟ್ ಇಂಡಿಯಾ.ಕಾಂ ವೆಬ್ ತಾಣದಲ್ಲಿ ಶುಕ್ರವಾರ ಅಪ್ಲೋಡ್ ಮಾಡಲಾಗಿದೆ. ಧ್ರುವೀಕರಣ, ದ್ವೇಷದ ರಾಜಕೀಯ, ದಲಿತರು, ಮುಸ್ಲಿಮರು ಹಾಗೂ ರೈತರ ಕಡೆಗಣನೆ, ದೇಶದ ಸಾಂಸ್ಕ್ರತಿಕ ಮತ್ತು ವೈಜ್ಞಾನಿಕ ಸಂಸ್ಥೆಗಳ ಅವನತಿ ಹಾಗೂ ಹೆಚ್ಚುತ್ತಿರುವ ಸೆನ್ಸಾರ್ ಶಿಪ್ ವಿರೋಧಿಸಿ ಬಿಜೆಪಿಗೆ ಮತ ನೀಡದೇ ಇರಲು ಕರೆ ನೀಡಲಾಗುತ್ತಿದೆ ಎಂದು ಹೇಳಿಕೆ ತಿಳಿಸಿದೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ನಮ್ಮ ಆಯ್ಕೆಯನ್ನು ಬುದ್ಧಿವಂತಿಕೆಯಿಂದ ಮಾಡದೇ ಇದ್ದಲ್ಲಿ ದೇಶದ ವೈವಿಧ್ಯತೆ ಅಪಾಯದಲ್ಲಿರುವುದು ಮಾತ್ರವಲ್ಲದೆ ಫ್ಯಾಸಿಸಂ ನಮಗೆ ಬಲವಾದ ಹೊಡೆತ ನೀಡುವ ಅಪಾಯವನ್ನು ನಾವು ಎದುರಿಸುತ್ತೇವೆ ಎಂದು ಬರೆಯಲಾಗಿದೆಯಲ್ಲದೆ ದೇಶವನ್ನು ಧರ್ಮದ ಆಧಾರದಲ್ಲಿ ಧ್ರುವೀಕರಣಗೊಳಿಸಲಾಗಿದೆ ಎಂದೂ ಬರೆಯಲಾಗಿದೆ.
ಕಿಂಚಿತ್ತಾದರೂ ಅಸಮ್ಮತಿ ತೋರುವ ಸಂಸ್ಥೆ ಯಾ ವ್ಯಕ್ತಿಯನ್ನು ದೇಶ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ 'ದೇಶಭಕ್ತಿ'ಯ ಹೆಸರಿನಲ್ಲಿ ಅವರು ತಮ್ಮ ಮತ ಬ್ಯಾಂಕ್ ಹೆಚ್ಚಿಸುತ್ತಿದಾರೆ ಎಂದೂ ಹೇಳಿಕೆ ತಿಳಿಸಿದೆ.