ಮಿಷನ್ ಶಕ್ತಿ ಬಗ್ಗೆ ಭಾಷಣ: ಪ್ರಧಾನಿ ಮೋದಿಗೆ ಚುನಾವಣಾ ಆಯೋಗದ ಕ್ಲೀನ್ ಚಿಟ್
ಹೊಸದಿಲ್ಲಿ, ಮಾ.29: ಮಿಷನ್ ಶಕ್ತಿ ಬಗ್ಗೆ ದೇಶವನ್ನುದ್ದೇಶಿಸಿ ಮಾತನಾಡಿರುವ ವಿಚಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಚುನಾವಣಾ ಆಯೋಗವು ಶುಕ್ರವಾರ ಕ್ಲೀನ್ ಚಿಟ್ ನೀಡಿದೆ.
ಮಿಶನ್ ಶಕ್ತಿ ವಿಚಾರದಲ್ಲಿ ಬುಧವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುವ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸಿರುವ ಚುನಾವಣಾ ಆಯೋಗವು ಪ್ರಧಾನ ಮಂತ್ರಿ ಹೇಳಿಕೆಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಬಾಹ್ಯಾಕಾಶದಲ್ಲಿರುವ ಸಜೀವ ಉಪಗ್ರಹವನ್ನು ಕ್ಷಿಪಣಿ ಮೂಲಕ ಹೊಡೆದುರುಳಿಸುವುದರೊಂದಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ‘ಸೂಪರ್ ಪವರ್’ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಇಂಥ ತಂತ್ರಜ್ಞಾನ ಹೊಂದಿರುವ ವಿಶ್ವದ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಿದೆ ಎಂದು ಪ್ರಧಾನ ಮಂತ್ರಿ ಕಳೆದ ಬುಧವಾರ ಪ್ರಕಟಿಸಿದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವಾಗ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದರು ಎಂದು ವಿಪಕ್ಷಗಳು ಆರೋಪ ಮಾಡಿತ್ತು. ಅದರಂತೆ ಚುನಾವಣಾ ಆಯೋಗವು ಈ ಪ್ರಕರಣದ ಬಗ್ಗೆ ಪರಿಶೀಲಿಸಿ ನಿರ್ಧಾರ ಕೈಗೊಂಡಿದೆ.